ADVERTISEMENT

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲವರ್ಧನೆ

ಗಿರೀಶದೊಡ್ಡಮನಿ
Published 18 ಫೆಬ್ರುವರಿ 2021, 19:30 IST
Last Updated 18 ಫೆಬ್ರುವರಿ 2021, 19:30 IST
ಕೈಲ್ ಜೆಮಿಸನ್
ಕೈಲ್ ಜೆಮಿಸನ್   

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿ ಶ್ರೇಷ್ಠ ಆಲ್‌ರೌಂಡರ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ತನ್ನ ಬಲ ವರ್ಧಿಸಿಕೊಂಡಿದೆ.

ಕಳೆದ 13 ಆವೃತ್ತಿಗಳಲ್ಲಿಯೂ ಪ್ರಶಸ್ತಿ ಗೆಲುವಿನ ಕನಸು ನನಸಾಗದ ಬೆಂಗಳೂರು ತಂಡವು ಈ ಬಾರಿ ಎದುರಾಳಿಗಳಿಗೆ ದಿಟ್ಟ ಉತ್ತರ ಕೊಡಲು ಸಿದ್ಧವಾಗಿದೆ. ಪಂಜಾಬ್ ಕಿಂಗ್ಸ್‌ ತಂಡದಿಂದ ಬಿಡುಗಡೆಯಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನ್ಯೂಜಿಲೆಂಡ್‌ನ ಆಲ್‌ರೌಂಡರ್ ಕೈಲ್ ಜೆಮಿಸನ್ ಅವರನ್ನು ತನ್ನ ತಂಡಕ್ಕೆ ಸೆಳೆದುಕೊಂಡಿದೆ. ಈ ಬಾರಿ ತಂಡವು ಮಧ್ಯಮವೇಗಿ ಉಮೇಶ್ ಯಾದವ್, ದಕ್ಷಿಣ ಆಫ್ರಿಕಾದ ವೇಗಿ ಡೆಲ್ ಸ್ಟೇಯ್ನ್, ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಮತ್ತು ಆಲ್‌ರೌಂಡರ್ ಕ್ರಿಸ್ ಮೊರಿಸ್ ಅವರನ್ನು ಬಿಡುಗಡೆ ಮಾಡಿತ್ತು. ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ನಿವೃತ್ತಿ ಘೋಷಿಸಿದ್ದರು.

ಈ ಹರಾಜಿನಲ್ಲಿ ಆರ್‌ಸಿಬಿಯು ಒಟ್ಟು ಎಂಟು ಆಟಗಾರರನ್ನು ಖರೀದಿಸಿದೆ. ಅದರಲ್ಲಿ ನಾಲ್ವರು ಆಲ್‌ರೌಂಡರ್, ಇಬ್ಬರು ಬ್ಯಾಟ್ಸ್‌ಮನ್ ಮತ್ತು ಇಬ್ಬರು ವಿಕೆಟ್‌ಕೀಪರ್‌ಗಳಿದ್ದಾರೆ.

ADVERTISEMENT

ನ್ಯೂಜಿಲೆಂಡ್‌ನ ಜೆಮಿಸನ್ ಮತ್ತು ಆಸ್ಟ್ರೇಲಿಯಾದ ಡೇನಿಯಲ್ ಕ್ರಿಸ್ಟಿಯನ್ ವೇಗದ ಬೌಲರ್ –ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಸ್ಪೋಟಕ ಶೈಲಿಯ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಆಫ್‌ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಇನ್ನುಳಿದಂತೆ ಯುವ ಆಟಗಾರರನ್ನೇ ತಂಡವು ಆಯ್ಕೆ ಮಾಡಿಕೊಂಡಿದೆ. ಮ್ಯಾಕ್ಸ್‌ವೆಲ್ ಹೋದವರ್ಷ ಪಂಜಾಬ್ ತಂಡದಲ್ಲಿದ್ದರು. ಆ ಋತುವಿನಲ್ಲಿ ಅವರು ಉತ್ತಮ ಲಯದಲ್ಲಿರಲಿಲ್ಲ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದ ಮೊಹಮ್ಮದ್ ಅಜರುದ್ಧಿನ್ ಮತ್ತು ಕೋನಾ ಶ್ರೀಕರ್ ಭರತ್ ಅವರು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಎಬಿ ಡಿವಿಲಿಯರ್ಸ್‌ ಅವರೊಂದಿಗೆ ವಿಕೆಟ್‌ಕೀಪಿಂಗ್ ಹೊಣೆಯನ್ನು ಈ ಇಬ್ಬರೂ ಹಂತ ಹಂತವಾಗಿ ಹಂಚಿಕೊಳ್ಳುವ ನಿರೀಕ್ಷೆ ಇದೆ. ಬಾಟ್ಟ್‌ಮನ್‌ಗಳಾದ ಸಚಿನ್ ಬೇಬಿ ಮತ್ತು ರಜತ್ ಪಾಟೀದಾರ ಅವರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಆದರೆ, ತಂಡವು ಕರ್ನಾಟಕದ ಆಟಗಾರರಿಗೆ ಈ ಸಲ ಮಣೆ ಹಾಕಿಲ್ಲ. ಬೆಂಗಳೂರಿನ ದೇವದತ್ತ ಪಡಿಕ್ಕಲ್ ಹೋದ ವರ್ಷದ ಟೂರ್ನಿಯಲ್ಲಿ ಆರ್‌ಸಿಬಿಗೆ ಪದಾರ್ಪಣೆ ಮಾಡಿ ಮಿಂಚಿದ್ದರು. ಅವರನ್ನು ಮತ್ತು ಕನ್ನಡಿಗ ಪವನ್ ದೇಶಪಾಂಡೆಯನ್ನು ತಂಡವು ಉಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.