ADVERTISEMENT

ಐಪಿಎಲ್ ಬ್ರ್ಯಾಂಡ್ ಮೌಲ್ಯದಲ್ಲಿ CSK ಹಿಂದಿಕ್ಕಿದ RCB: ಯಾವ ತಂಡಕ್ಕೆ ಅಗ್ರಸ್ಥಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 9:30 IST
Last Updated 10 ಡಿಸೆಂಬರ್ 2025, 9:30 IST
<div class="paragraphs"><p>ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಟಗಾರರ ಸಂಭ್ರಮ</p></div>

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಟಗಾರರ ಸಂಭ್ರಮ

   

ಪಿಟಿಐ ಚಿತ್ರ

2024ರಲ್ಲಿ ಸುಮಾರು ₹1,2 ಲಕ್ಷ ಕೋಟಿ (12 ಬಿಲಿಯನ್‌ ಡಾಲರ್) ಇದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೌಲ್ಯ 2025 ರಲ್ಲಿ ಶೇ 20 ರಷ್ಟು ಕುಸಿತ ಅನುಭವಿಸುವ ಮೂಲಕ ಸುಮಾರು ₹86 ಸಾವಿರ ಕೋಟಿಗೆ (9.6 ಬಿಲಿಯನ್‌ ಡಾಲರ್‌)ಗೆ ತಲುಪಿದೆ ಎಂದು ಬ್ರಾಂಡ್ ಫೈನಾನ್ಸ್‌ನ ಅಂಕಿಅಂಶಗಳು ತಿಳಿಸಿವೆ. ಆದರೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್‌ಕೆ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.

ADVERTISEMENT

ಕುಸಿತಕ್ಕೆ ಕಾರಣಗಳು?

ಈ ದೊಡ್ಡ ಪ್ರಮಾಣದ ಕುಸಿತಕ್ಕೆ ಪ್ರಮುಖ ಕಾರಣವೆಂದರೆ, ಆಪರೇಷನ್ ಸಿಂಧೂರ ಬಳಿಕ ಉಂಟಾದ ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆಯಿಂದಾಗಿ ಲೀಗ್ ಅನ್ನು ಮುಂದೂಡಿರುವುದು.

ಮತ್ತೊಂದು ಪ್ರಮುಖ ಕಾರಣವೆಂದರೆ, ಮೆಗಾ ಹರಾಜಿನಲ್ಲಿ ಉಂಟಾದ ಗೊಂದಲ. ಬಹುತೇಕ ತಂಡಗಳು ಕಳೆದ ವರ್ಷ ಮೆಗಾ ಹರಾಜಿನ ಕುರಿತು ತಮ್ಮ ಆಟಗಾರರನ್ನು ಬಿಟ್ಟುಕೊಡಲು ಆಕ್ಷೇಪ ವ್ಯಕ್ತಪಡಿಸಿದ್ದವು.

ಬ್ರಾಂಡ್ ಫೈನಾನ್ಸ್ ವರದಿ ಪ್ರಕಾರ, 2025ರಲ್ಲಿ ತನ್ನ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡ ಏಕೈಕ ತಂಡವೆಂದರೆ ಗುಜರಾತ್ ಟೈಟಾನ್ಸ್ ಮಾತ್ರ. ಈ ನಡುವೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿ ಎರಡನೇ ಅತ್ಯಂತ ಮೌಲ್ಯಯುತ ತಂಡವಾಗಿ ಸ್ಥಾನ ಪಡೆದಿದೆ. ಅಗ್ರಸ್ಥಾನದಲ್ಲಿ ಮುಂಬೈ ಇದೆ.

ಮುಂಬೈ ಇಂಡಿಯನ್ಸ್: ಬ್ರಾಂಡ್ ಫೈನಾನ್ಸ್ ವರದಿ ಪ್ರಕಾರ ₹₹902 ಕೋಟಿ ಮೌಲ್ಯ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ಅತೀ ಹೆಚ್ಚು ಮೌಲ್ಯ ಹೊಂದಿರುವ ತಂಡ ಎಂಬ ಖ್ಯಾತಿ ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 18 ವರ್ಷಗಳ ಬಳಿಕ ತನ್ನ ಮೊದಲ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡ ₹876.75 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಅದಾಗ್ಯೂ, ಈ ತಂಡದ ಮೌಲ್ಯ 2024ಕ್ಕಿಂತ ಶೇ 10ರಷ್ಟು ಕುಸಿತ ಕಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್: ಕಳೆದ ವರ್ಷ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವುದು ಸಿಎಸ್‌ಕೆ ತಂಡದ ಬ್ರ್ಯಾಂಡ್‌ಗೆ ಭಾರಿ ಹೊಡೆತ ನೀಡಿದೆ. ಸದ್ಯ, ₹776.55 ಕೋಟಿ ಬ್ರಾಂಡ್ ಮೌಲ್ಯ ಹೊಂದಿದೆ. ಕಳೆದ ವರ್ಷಕ್ಕಿಂತ ಶೇ 24ರಷ್ಟು ಕುಸಿತ ಕಂಡಿದ್ದು, ಅಗ್ರಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್: 2024ರ ಚಾಂಪಿಯನ್, ಶಾರುಖ್ ಖಾನ್ ಮಾಲಿಕತ್ವದ ಕೆಕೆಆರ್ ತಂಡ ₹617.9 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಗುಜರಾತ್ ಟೈಟಾನ್ಸ್: ₹584.5 ಕೋಟಿ ಮೌಲ್ಯದೊಂದಿಗೆ ಜಿಟಿ ತಂಡ 8ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಆ ಮೂಲಕ ಈ ವರ್ಷ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡ ಏಕೈಕ ತಂಡವಾಗಿದೆ.

ಪಂಜಾಬ್ ಕಿಂಗ್ಸ್: 2025ನೇ ಸಾಲಿನ ಐಪಿಎಲ್ ರನ್ನರ್ ಅಪ್ ಪಂಜಾಬ್ ಕಿಂಗ್ಸ್, ₹551.1 ಕೋಟಿ ಮೌಲ್ಯದೊಂದಿಗೆ 9ನೇ ಸ್ಥಾನದಿಂದ ಜಿಗಿತ ಕಂಡು 6ನೇ ಸ್ಥಾನದಲ್ಲಿದೆ.

ಲಖನೌ ಸೂಪರ್ ಜೈಂಟ್ಸ್: ₹492.65 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ರಿಷಬ್ ಪಂತ್ ನಾಯಕತ್ವದ ಎಲ್‌ಎಸ್‌ಜಿ ತಂಡ 7ನೇ ಸ್ಥಾನದಲ್ಲಿದೆ. ಕಳೆದ ಬಾರಿಗಿಂತ ಶೇಕಡಾ 2ರಷ್ಟು ಕುಸಿತ ಕಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್: ₹492.65 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದೆ. ಅಕ್ಷರ್ ಪಟೇಲ್ ನಾಯಕತ್ವದ ತಂಡದಲ್ಲಿ ಕೆ.ಎಲ್. ರಾಹುಲ್, ಮಿಚೆಲ್ ಸ್ಟಾರ್ಕ್‌ರಂತಹ ತಾರಾ ಆಟಗಾರರಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್: ₹467.6 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ಎಸ್‌ಆರ್‌ಎಚ್ ಕಳೆದ ವರ್ಷ 5ನೇ ಸ್ಥಾನದಲ್ಲಿತ್ತು. ಆದರೆ, 2025ರ ಹೀನಾಯ ಪ್ರದರ್ಶನದಿಂದಾಗಿ 9ನೇ ಸ್ಥಾನಕ್ಕೆ ಕುಸಿದಿದೆ.

ರಾಜಸ್ಥಾನ ರಾಯಲ್ಸ್: ₹442.55 ಕೋಟಿ ಬ್ರ್ಯಾಂಡ್ ಮೌಲ್ಯದ ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಬ್ರ್ಯಾಂಡ್ ಮೌಲ್ಯದಲ್ಲಿ ಶೇ 35ರಷ್ಟು ಕುಸಿತ ಕಂಡು ಕೊನೆಯ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.