ADVERTISEMENT

IPL-2020 | SRH vs CSK: ಸನ್‌ರೈಸರ್ಸ್‌ಗೆ ಸೋಲುಣಿಸಿದ ಸೂಪರ್‌ಕಿಂಗ್ಸ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 18:30 IST
Last Updated 13 ಅಕ್ಟೋಬರ್ 2020, 18:30 IST
ಜಯದ ಸಂಭ್ರಮದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಆಟಗಾರರು (ಟ್ವಿಟರ್ ಚಿತ್ರ)
ಜಯದ ಸಂಭ್ರಮದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಆಟಗಾರರು (ಟ್ವಿಟರ್ ಚಿತ್ರ)   

ದುಬೈ: ಸನ್‌ರೈಸರ್ಸ್ ಹೈದರಾಬಾದ್‌ ತಂಡದ ವಿರುದ್ಧ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ 20 ರನ್‌ ಅಂತರದ ಗೆಲುವು ಸಾಧಿಸಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ, ಶೇನ್‌ ವಾಟ್ಸನ್‌ ಹಾಗೂ ಅಂಬಟಿ ರಾಯುಡು ಅವರ ಬ್ಯಾಟಿಂಗ್‌ ನೆರವಿನಿಂದನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 167 ರನ್ ಗಳಿಸಿತು.

ಈ ಪಂದ್ಯದಲ್ಲಿವಾಟ್ಸನ್‌ ಬದಲು ಫಾಫ್‌ ಡು ಪ್ಲೆಸಿ ಜೊತೆಗೆ ಸ್ಯಾಮ್‌ ಕರನ್‌ ಇನಿಂಗ್ಸ್‌ ಆರಂಭಿಸಿದರು. ಆದರೆ ಈ ಇಬ್ಬರೂ ತಂಡದ ಮೊತ್ತ 35 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು.ಕಳೆದ ಪಂದ್ಯಗಳಲ್ಲಿ ಮಿಂಚಿದ್ದಪ್ಲೆಸಿ ಇಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಸ್ಯಾಮ್ 31 ರನ್‌ ಗಳಿಸಿ ಔಟಾದರು.

ADVERTISEMENT

ಬಳಿಕ ಜೊತೆಯಾದ ಶೇನ್‌ ವಾಟ್ಸನ್‌ ಮತ್ತು ಅಂಬಟಿ ರಾಯುಡುಮೂರನೇ ವಿಕೆಟ್‌ ಜೊತೆಯಾಟದಲ್ಲಿ 81 ರನ್‌ ಗಳಿಸಿದರು. ವಾಟ್ಸನ್‌ 38 ಎಸೆತಗಳಲ್ಲಿ42 ರನ್‌ ಬಾರಿಸಿದರೆ, ರಾಯುಡು 34 ಎಸೆತಗಳಲ್ಲಿ 41 ರನ್‌ ಗಳಿಸಿದರು. ಈ ಇಬ್ಬರೂ ಕೇವಲ 4 ರನ್‌ ಅಂತರದಲ್ಲಿ ವಿಕೆಟ್‌ ಒಪ್ಪಿಸಿದರು. ನಾಯಕ ಎಂಎಸ್‌ ಧೋನಿ (21) ಮತ್ತು ರವೀಂದ್ರ ಜಡೇಜಾ (25) ಕೊನೆಯಲ್ಲಿ ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಿತು.

ರೈಸರ್ಸ್‌ಗೆ ಆರಂಭಿಕ ಆಘಾತ
ಈ ಗುರಿ ಬೆನ್ನತ್ತಿದ ರೈಸರ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಜಾನಿ ಬೈರ್ಸ್ಟ್ರೋವ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಡೇವಿಡ್‌ ವಾರ್ನರ್‌ (9) ಹಾಗೂ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮನೀಷ್‌ ಪಾಂಡೆ (4) ನಾಲ್ಕನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿಕೊಂಡರು. 23 ರನ್‌ ಗಳಿಸಿಬೈರ್ಸ್ಟ್ರೋವ್‌ ಕೂಡ ಔಟಾದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಗಟ್ಟಿಯಾಗಿ ನಿಂತು ಆಡಿದ ಕೇನ್‌ ವಿಲಿಯಮ್ಸನ್ ಏಕಾಂಗಿ ಹೋರಾಟ ನಡೆಸಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ನೆರವು ಸಿಗದ ಕಾರಣ, ವಿಲಿಯಮ್ಸನ್‌ಹೋರಾಟವ್ಯರ್ಥವಾಯಿತು.

ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಸಹಿತ 57 ರನ್‌ ಗಳಿಸಿದ್ದ ಅವರು ಕೊನೆಯ ಹಂತದಲ್ಲಿ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಚೆನ್ನೈ ಪರ ಡ್ವೇನ್‌ ಬ್ರಾವೋಮತ್ತು ಕರಣ್‌ ಶರ್ಮಾ ಎರಡೆರಡು ವಿಕೆಟ್‌ಗಳನ್ನು ಪಡೆದುಕೊಂಡರೆ,ರವೀಂದ್ರ ಜಡೇಜಾ, ಸ್ಯಾಮ್‌ ಕರನ್ ಮತ್ತು ಶಾರ್ದೂಲ್ ಠಾಕೂರ್‌ ತಲಾ ಒಂದು ವಿಕೆಟ್ ಕಬಳಿಸಿದರು.

ಈ ಎರಡೂ ತಂಡಗಳು ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿದ್ದು, ತಲಾ ಮೂರರಲ್ಲಿ ಗೆಲುವು ಸಾಧಿಸಿವೆ. ರನ್‌ರೇಟ್ ಆಧಾರದಲ್ಲಿ ರೈಸರ್ಸ್‌ 5ನೇ ಸ್ಥಾನದಲ್ಲಿದ್ದು, ಕಿಂಗ್ಸ್‌ಆರರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.