IPL ಎಕ್ಸ್ ಖಾತೆಯ ಚಿತ್ರ
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಜೋಡಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಅವರ ದಾಳಿಯ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ಸಾಧಾರಣ ಮೊತ್ತ ಗಳಿಸಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್ ಗಳಿಸಿತು. ಭುವನೇಶ್ವರ್ (33ಕ್ಕೆ3) ಮತ್ತು ಹೇಜಲ್‌ವುಡ್ (36ಕ್ಕೆ2) ಅವರ ದಾಳಿಯ ನಡುವೆಯೂ ಡೆಲ್ಲಿ ತಂಡದಲ್ಲಿರುವ ಕನ್ನಡಿಗ ಕೆ.ಎಲ್. ರಾಹುಲ್ (41; 39ಎ, 4X3) ಹಾಗೂ ಟ್ರಿಸ್ಟನ್ ಸ್ಟಬ್ಸ್ (34; 18ಎ, 4X5, 6X1) ಆಟ ಚೇತೋಹಾರಿಯಾಗಿತ್ತು.
ಟಾಸ್ ಗೆದ್ದ ಆರ್‌ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ತಂಡಕ್ಕೆ ಅಭಿಷೇಕ್ ಪೊರೆಲ್ (28; 11ಎ, 4X2, 6X2) ಮತ್ತು ಡುಪ್ಲೆಸಿ (22; 26ಎ, 4X2) ಉತ್ತಮ ಆರಂಭ ನೀಡಿದರು. ಆದರೆ 4ನೇ ಓವರ್‌ನಲ್ಲಿ ಹೇಜಲ್‌ವುಡ್ ಎಸೆತದಲ್ಲಿ ಪೊರೆಲ್ ಅವರು ವಿಕೆಟ್‌ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚಿತ್ತರು. ನಂತರದ ಓವರ್‌ನಲ್ಲಿ ಕೃಣಾಲ್ ಪಾಂಡ್ಯ ಸ್ಪಿನ್ ದಾಳಿಗೆ ಡುಪ್ಲೆಸಿ ಔಟಾದರು.
ಕರುಣ್ ನಾಯರ್ (4 ರನ್) ಒಂದು ಬೌಂಡರಿ ಗಳಿಸಿ ಆಟಕ್ಕೆ ಕುದುರಿಕೊಳ್ಳುವ ಮುನ್ಸೂಚನೆ ನೀಡಿದರು. ಆದರೆ ಯಶ್ ದಯಾಳ್ ಎಸೆತವನ್ನು ಆಡಿದ ಕರುಣ್ ಭುವನೇಶ್ವರ್‌ಗೆ ಕ್ಯಾಚ್ ಆದರು. ಈ ಹಂತದಲ್ಲಿ ರಾಹುಲ್ ಅವರು ಎಚ್ಚರಿಕೆಯಿಂದ ಆಡಿದರು.
ಅಕ್ಷರ್ ಪಟೇಲ್ (15 ರನ್) ಅವರ ವಿಕೆಟ್ ಹಾರಿಸಿದ ಹೇಜಲ್‌ವುಡ್ ಸಂಭ್ರಮಿಸಿದರು.
ಭುವನೇಶ್ವರ್ ಕುಮಾರ್ ಅವರು ಇಲ್ಲಿಂದ ತಮ್ಮ ಬೇಟೆ ಆರಂಭಿಸಿದರು. ಅರ್ಧಶತಕದತ್ತ ಸಾಗಿದ್ದ ರಾಹುಲ್ ವಿಕೆಟ್ ಕಬಳಿಸಿದ ಭುವನೇಶ್ವರ್ ಸಂಭ್ರಮಿಸಿದರು. ಟ್ರಿಸ್ಟನ್ ಸ್ಟಬ್ಸ್ ಅವರ ಆಟಕ್ಕೂ ಭುವಿ ಕಡಿವಾಣ ಹಾಕಿದರು. ಆಶುತೋಷ್ ಶರ್ಮಾ ಅವನ್ನು ಕ್ಲೀನ್‌ಬೌಲ್ಡ್ ಮಾಡಿದರು. ವಿಪ್ರಜ್ ನಿಗಮ್ ಅವರನ್ನ ಕೊಹ್ಲಿಯೊಂದಿಗೆ ಸೇರಿ ರನ್‌ಔಟ್ ಮಾಡುವಲ್ಲಿಯೂ ಭುವಿ ಯಶಸ್ವಿಯಾದರು.
ಇನಿಂಗ್ಸ್‌ನ ಕೊನೆಯ ನಾಲ್ಕು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು. 44 ರನ್‌ಗಳು ಡೆಲ್ಲಿ ಖಾತೆ ಸೇರಿದವು.
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8ಕ್ಕೆ162 (ಅಭಿಷೇಕ್ ಪೊರೆಲ್ 28, ಫಾಫ್ ಡುಪ್ಲೆಸಿ 22, ಕೆ.ಎಲ್. ರಾಹುಲ್ 41, ಟ್ರಿಸ್ಟನ್ ಸ್ಟಬ್ಸ್ 34, ಭುವನೇಶ್ವರ್ ಕುಮಾರ್ 33ಕ್ಕೆ3, ಜೋಶ್ ಹೇಜಲ್‌ವುಡ್ 36ಕ್ಕೆ2) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್.
ರಾಹುಲ್ ವರ್ಸಸ್ ಕೊಹ್ಲಿ
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತ್ತು. ಆಗ ಗೆಲುವಿನ ರೂವಾರಿಯಾಗಿದ್ದ ಕೆ.ಎಲ್. ರಾಹುಲ್ ಅವರು, ‘ಇದು ನನ್ನ ನೆಲ’ ಎಂದು ‘ಕಾಂತಾರ’ ಚಲನಚಿತ್ರದ ದೃಶ್ಯದ ಮಾದರಿಯನ್ನು ಅನುಕರಿಸಿದ್ದರು. ಇದೀಗ, ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ ಇದೆ. ದೆಹಲಿ ವಿರಾಟ್ ಹುಟ್ಟೂರಾಗಿರುವುದರಿಂದ ಇಲ್ಲಿ ಡೆಲ್ಲಿ ವಿರುದ್ಧ ಆರ್‌ಸಿಬಿ ಗೆದ್ದರೆ ವಿರಾಟ್ ತಿರುಗೆಟು ನೀಡದಂತಾಗಲಿದೆ.
ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎಂಟು ಪಂದ್ಯಗಳನ್ನು ಆಡಿ 6ರಲ್ಲಿ ಜಯಿಸಿ, 2ರಲ್ಲಿ ಸೋತಿದೆ. ಆರ್‌ಸಿಬಿ 9 ಪಂದ್ಯ ಆಡಿ 6 ಗೆದ್ದು, 3ರಲ್ಲಿ ಸೋತಿದೆ. ಉಭಯ ತಂಡಗಳೂ ತಲಾ 12 ಅಂಕಗಳನ್ನು ಗಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.