ADVERTISEMENT

ಯಾವುದೇ ತಂಡ 300 ರನ್ ಕಲೆಹಾಕಲು ಸಾಧ್ಯ ಎಂಬ ಹಂತಕ್ಕೆ IPL ತಲುಪಿದೆ: ರಿಂಕು ಸಿಂಗ್

ಪಿಟಿಐ
Published 26 ಏಪ್ರಿಲ್ 2025, 9:21 IST
Last Updated 26 ಏಪ್ರಿಲ್ 2025, 9:21 IST
<div class="paragraphs"><p>ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಬ್ಯಾಟರ್‌ ರಿಂಕು ಸಿಂಗ್‌</p></div>

ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಬ್ಯಾಟರ್‌ ರಿಂಕು ಸಿಂಗ್‌

   

ಪಿಟಿಐ ಚಿತ್ರ

ಕೋಲ್ಕತ್ತ: ಯಾವುದೇ ತಂಡ ಇನಿಂಗ್ಸ್‌ವೊಂದರಲ್ಲಿ 300 ರನ್‌ ಕಲೆಹಾಕಲು ಸಾಧ್ಯ ಎನ್ನುವ ಹಂತಕ್ಕೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಪಿಟಿಐ) ತಲುಪಿದೆ ಎಂದು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಬ್ಯಾಟರ್‌ ರಿಂಕು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಜಿಯೋಹಾಟ್‌ಸ್ಟಾರ್‌ ಚರ್ಚೆಯಲ್ಲಿ ಭಾಗವಹಿಸಿದ ರಿಂಕು, ಐಪಿಎಲ್‌ನಲ್ಲಿ ತಂಡಗಳು ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಬೆ‌ನ್ನತ್ತಿ ಗೆಲ್ಲುತ್ತಿರುವುದನ್ನು ಉಲ್ಲೇಖಿಸಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

300 ರನ್‌ ಕಲೆಹಾಕುವ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಿಂಕು, 'ಹೌದು, ನಾವು ಅದನ್ನು ಸಾಧಿಸಲು (ಅ‌ಷ್ಟು ರನ್ ಗಳಿಸಲು) ಸಾಧ್ಯವಿದೆ. 300 ರನ್‌ ಗಳಿಸಬಹುದು ಎನ್ನುವ ಹಂತಕ್ಕೆ ಐಪಿಎಲ್‌ ತಲುಪಿದೆ. ಕಳೆದ ವರ್ಷ ಪಂಜಾಬ್‌ ಕಿಂಗ್ಸ್‌ 262 ರನ್‌ ಗುರಿ ಬೆನ್ನತ್ತಿ ಗೆದ್ದಿತ್ತು. ಈ ಆವೃತ್ತಿಯಲ್ಲಿ ಎಲ್ಲ ತಂಡಗಳೂ ಬಲಿಷ್ಠವಾಗಿವೆ. ಯಾವುದೇ ತಂಡ 300 ರನ್‌ ಗಳಿಸಬಲ್ಲದು' ಎಂದು ಹೇಳಿದ್ದಾರೆ.

ಕಳೆದ ವರ್ಷ ಮೂರು ಬಾರಿ 250ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌), ಈ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ 300ರ ಸನಿಹಕ್ಕೆ ತಲುಪಿತ್ತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಆ ಪಂದ್ಯದಲ್ಲಿ 7 ವಿಕೆಟ್‌ಗೆ 286 ರನ್‌ ಗಳಿಸಿತ್ತು.

ಎಸ್‌ಆರ್‌ಎಚ್‌, ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ 3 ವಿಕೆಟ್‌ಗೆ 287 ರನ್‌ ಗಳಿಸಿದ್ದು, ಐಪಿಎಲ್‌ನ ದಾಖಲೆಯ ಮೊತ್ತವಾಗಿದೆ.

ಹಾಲಿ ಚಾಂಪಿಯನ್‌ ಕೆಕೆಆರ್‌ ಪರ ಫಿನಿಷರ್‌ ಪಾತ್ರ ನಿಭಾಯಿಸುತ್ತಿರುವ ರಿಂಕು, ಫಿಟ್‌ನೆಸ್‌ ಕುರಿತು ಮಾತನಾಡಿದ್ದಾರೆ.

'ನಾನು ಸಾಮಾನ್ಯವಾಗಿ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ. ಉತ್ತರ ಪ್ರದೇಶ ತಂಡ ಹಾಗೂ ಐಪಿಎಲ್‌ನಲ್ಲಿಯೂ ಅದೇ ಪಾತ್ರ ನಿರ್ವಹಿಸುತ್ತೇನೆ. ಐಪಿಎಲ್‌ನಲ್ಲಿ 14 ಪಂದ್ಯಗಳನ್ನು ಆಡಬೇಕಿರುವುದರಿಂದ ಫಿಟ್‌ನೆಸ್‌ಗೆ ಒತ್ತು ನೀಡುತ್ತೇನೆ. ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ನನ್ನ ಜವಾಬ್ದಾರಿಯೂ ಹೌದು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.