ಮಹೇಂದ್ರ ಸಿಂಗ್ ಧೋನಿ
(ಪಿಟಿಐ ಚಿತ್ರ)
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳೆದೆರಡು ಸಾಲಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ ನೀಡಿದೆ ಎಂದು ಒಪ್ಪಿಕೊಂಡಿರುವ ದಿಗ್ಗಜ ಮಹೇಂದ್ರ ಸಿಂಗ್ ಧೋನಿ, ಮುಂದಿನ ಆವೃತ್ತಿಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
'ಹೌದು, ಕಳೆದೆರಡು ವರ್ಷಗಳು ನಮ್ಮ ಪಾಲಿಗೆ ಉತ್ತಮವಾಗಿರಲಿಲ್ಲ. ನಾವು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದರಿಂದ ಪಾಠ ಕಲಿಯುವುದು ಮುಖ್ಯವೆನಿಸುತ್ತದೆ. ಎಲ್ಲಿ ತಪ್ಪಾಯಿತು ಎಂಬುದನ್ನು ಮನಗಂಡು ಸರಿಪಡಿಸಬೇಕಿದೆ' ಎಂದು ಹೇಳಿದ್ದಾರೆ.
'ತಂಡದಲ್ಲಿ ಕೆಲವೊಂದು ನ್ಯೂನತೆಗಳಿವೆ. ಅದನ್ನು ನಿಖರವಾಗಿ ಕಂಡುಹಿಡಿದು ಸರಿಪಡಿಸಬೇಕಿದೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸಲಿದ್ದೇವೆ' ಎಂದು ತಿಳಿಸಿದ್ದಾರೆ.
'ಮುಂದಿನ ಆವೃತ್ತಿಯಲ್ಲಿ ತಂಡದ ನಾಯಕ ಋತುರಾಜ್ ಗಾಯಕವಾಡ್ ಆಗಮನದಿಂದ ಬ್ಯಾಟಿಂಗ್ ವಿಭಾಗದ ಸಮಸ್ಯೆಗೆ ಪರಿಹಾರ ಸಿಗಲಿದೆ' ಎಂದು ಧೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಸಾಲಿನಲ್ಲಿ ಟೂರ್ನಿಯ ಮೊದಲಾರ್ಧದಲ್ಲಿ ಋತುರಾಜ್ ಗಾಯಗೊಂಡ ಪರಿಣಾಮ ಧೋನಿ ತಂಡದ ನಾಯಕತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಚೆನ್ನೈ ತಂಡದ ಭಾಗವಾಗಲು ಸಾಧ್ಯವಾಗಿರುವುದಕ್ಕೆ ಮತ್ತು ಅಭಿಮಾನಿಗಳ ನಿರಂತರ ಬೆಂಬಲಕ್ಕಾಗಿ ಧೋನಿ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.