ADVERTISEMENT

India–Pak Tensions: ಐಪಿಎಲ್‌ ಪಂದ್ಯಗಳು ಒಂದು ವಾರ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2025, 10:25 IST
Last Updated 9 ಮೇ 2025, 10:25 IST
<div class="paragraphs"><p> ಐಪಿಎಲ್‌ ಪಂದ್ಯಗಳು </p></div>

ಐಪಿಎಲ್‌ ಪಂದ್ಯಗಳು

   -

ನವದೆಹಲಿ: ಭಾರತ– ಪಾಕ್‌ ಗಡಿಯಲ್ಲಿ ಸಂಘರ್ಷದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರ ಸ್ಥಗಿತಗೊಳಿಸಲಾಗಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಗಡಿಯಾಚೆಯ ಭಯೋತ್ಪಾದಕರ ಅಪ್ರಚೋದಿತ ದಾಳಿಗೆ ಉತ್ತರ ನೀಡುವಾಗ ರಾಷ್ಟ್ರದ ಹಿತಾಸಕ್ತಿ ಇತರ ಎಲ್ಲಾ ವಿಷಯಗಳಿಗಿಂತ ಮುಖ್ಯವಾಗುತ್ತದೆ ಎಂದು ಮಂಡಳಿ ಹೇಳಿದೆ.

ADVERTISEMENT

ಧರ್ಮಶಾಲಾದಲ್ಲಿ ಗುರುವಾರ ಪಂಜಾಬ್‌ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಸಮೀಪದ ಪಠಾಣ್‌ಕೋಟ್‌ ಮತ್ತು ಜಮ್ಮು ನಗರಗಳಲ್ಲಿ ವೈಮಾನಿಕ ದಾಳಿಗಳು ನಡೆಯಬಹುದೆಂಬ ಮುನ್ನೆಚ್ಚರಿಕೆಯಿಂದ ಧರ್ಮಶಾಲಾದಲ್ಲೂ ‘ಬ್ಲ್ಯಾಕ್‌ಔಟ್‌’ ಮಾಡಲಾಗಿತ್ತು.

‘ಹಾಲಿ ಐಪಿಎಲ್‌ ಆವೃತ್ತಿಯ ಉಳಿದ ಪಂದ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರ ಸ್ಥಗಿತಗೊಳಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಸಕ್ತ ಪರಿಸ್ಥಿತಿಯ ಸಮಗ್ರ ಅವಲೋಕನದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಭಾಗೀದಾರರ ಜೊತೆ ಸಮಾಲೋಚನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳಗಳ ಪರಿಷ್ಕೃತ ವಿವರಗಳನ್ನು  ನೀಡಲಾಗುವುದು’ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮೊದಲು ನಿಗದಿಪ‍ಡಿಸಿದ ವೇಳಾಪಟ್ಟಿಯ ಪ್ರಕಾರ ಇದೇ ತಿಂಗಳ 25ರಂದು ಕೋಲ್ಕತ್ತದಲ್ಲಿ ಐಪಿಎಲ್‌ ಫೈನಲ್ ನಿಗದಿಯಾಗಿತ್ತು. ಈಗ 16 ಪಂದ್ಯಗಳು (12 ಲೀಗ್ ಮತ್ತು ನಾಲ್ಕು ನಾಕೌಟ್‌) ಉಳಿದಿದ್ದು, ಅವುಗಳನ್ನು ಪ್ರಶಸ್ತವೆನಿಸುವ ಸಮಯದಲ್ಲಿ ನಡೆಸಲು ಮಂಡಳಿ ಉದ್ದೇಶಿಸಿದೆ.

ಬರುವ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಏಷ್ಯಾ ಕಪ್‌ ಟೂರ್ನಿಯನ್ನು ರದ್ದುಗೊಳಿಸಿದಲ್ಲಿ ಆ ಅವಧಿಯಲ್ಲಿ ಲೀಗ್‌ನ ಉಳಿದ ಪಂದ್ಯಗಳನ್ನು  ನಡೆಸುವುದು ಒಂದು ಆಯ್ಕೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

‘ಈ ತುರ್ತು ಸಂದರ್ಭದಲ್ಲಿ ಬಿಸಿಸಿಐ ದೇಶದ ಜೊತೆಗೆ ನಿಲ್ಲಲಿದೆ. ಸಶಸ್ತ್ರ ಪಡೆ ಮತ್ತು ದೇಶದ ಜನರೊಡನೆ ನಾವೂ ಇದ್ದೇವೆ. ಕ್ರಿಕೆಟ್‌ ದೇಶದಲ್ಲಿ ಅಚ್ಚುಮೆಚ್ಚಿನ ಕ್ರೀಡೆಯಾಗಿ ಉಳಿದಿರಬಹುದು. ಆದರೆ ಅದು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಗಿಂತ ಮಿಗಿಲು ಅಲ್ಲ’ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

62 ಆಟಗಾರರು:

2024ರ ಕೊನೆಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಐಪಿಎಲ್‌ನ 10 ಫ್ರಾಂಚೈಸಿ ತಂಡಗಳಿಗೆ ಒಟ್ಟು 62 ಮಂದಿ ವಿದೇಶಿ ಆಟಗಾರರು ಸೇರ್ಪಡೆಯಾಗಿದ್ದರು. ಗಡಿಯಲ್ಲಿ ಮಿಲಿಟರಿ ಕಾರ್ಯಾಚರಣೆಯು ಈ ಆಟಗಾರರಲ್ಲಿ ಆತಂಕ ಮೂಡಿಸಿದೆ.

‘ಆಟಗಾರರೆಲ್ಲಾ ಸುರಕ್ಷಿತವಾಗಿದ್ದಾರೆ. ಆದರೆ ಗಡಿಯಲ್ಲಿನ ಬೆಳವಣಿಗೆಯಿಂದ ಅವರಲ್ಲಿ ಆತಂಕ ಉಂಟಾಗಿದೆ’ ಎಂದು ಐಪಿಎಲ್‌ ತಂಡವೊಂದರ ಸಿಬ್ಬಂದಿ ಸುದ್ದಿಸಂಸ್ಥೆಗೆ ತಿಳಿಸಿದರು.

ಭಾರತ ಮತ್ತು ಪಾಕಿಸ್ತಾನದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ಸಿಡ್ನಿಯಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ. ನ್ಯೂಜಿಲೆಂಡ್ ಪ್ಲೇಯರ್ಸ್‌ ಅಸೋಸಿಯೇಷನ್ ಮತ್ತು ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಮಂಡಳಿ ಸಹ ಆಟಗಾರರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ.

ಗುರುವಾರ ಧರ್ಮಶಾಲಾದಲ್ಲಿ ಪಂದ್ಯ ಸ್ಥಗಿತಗೊಂಡ ನಂತರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಆಟಗಾರರು ರಸ್ತೆ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸಿದ್ದಾರೆ.

ಶುಕ್ರವಾರ ಲಖನೌದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಣ ಪಂದ್ಯ ನಿಗದಿಯಾಗಿದ್ದು ಅದು ನಡೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.