ಜಿತೇಶ್ ಶರ್ಮಾ, ಮಯಂಕ್ ಅಗರವಾಲ್ ಸಂಭ್ರಮ
(ಪಿಟಿಐ ಚಿತ್ರ)
ಬೆಂಗಳೂರು: ಉಸ್ತುವಾರಿ ನಾಯಕ ಜಿತೇಶ್ ಶರ್ಮಾ (85*), ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ (54) ಹಾಗೂ ಮಯಂಕ್ ಅಗರವಾಲ್ (41*) ಅಮೋಘ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಆ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿರುವ ಆರ್‌ಸಿಬಿ, ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು.
ಮತ್ತೊಂದೆಡೆ ಲಖನೌ ತಂಡದ ನಾಯಕ ರಿಷಭ್ ಪಂತ್ ಶತಕದ (118*) ಹೋರಾಟವು ವ್ಯರ್ಥವೆನಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಪಂತ್ ಶತಕ ಹಾಗೂ ಮಿಷೆಲ್ ಮಾರ್ಷ್ ಅರ್ಧಶತಕದ (67) ಬಲದಿಂದ ಮೂರು ವಿಕೆಟ್ ನಷ್ಟಕ್ಕೆ 227 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಜಿತೇಶ್ ಶರ್ಮಾ ಕೇವಲ 33 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ನೆರವಿನಿಂದ ಅಜೇಯ 85 ರನ್ ಗಳಿಸಿ ಅಬ್ಬರಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಯಂಕ್ ಅಗರವಾಲ್ 41 ರನ್ (23 ಎಸೆತ) ಗಳಿಸಿ ಔಟಾಗದೆ ಉಳಿದರು.
ಇದಕ್ಕೂ ಮೊದಲು ವಿರಾಟ್ ಕೊಹ್ಲಿ (54 ರನ್, 30 ಎಸೆತ) ಹಾಗೂ ಫಿಲ್ ಸಾಲ್ಟ್ (30 ರನ್) ಉಪಯುಕ್ತ ಕಾಣಿಕೆ ನೀಡಿದರು. ಲಖನೌ ಪರ ಎರಡು ವಿಕೆಟ್ ಗಳಿಸಿದರೂ 74 ರನ್ ಬಿಟ್ಟುಕೊಟ್ಟ ವಿಲ್ ಓ ರೂರ್ಕಿ ದುಬಾರಿ ಎನಿಸಿದರು.
ಆರ್‌ಸಿಬಿಗೆ 2ನೇ ಸ್ಥಾನ...
ಈ ಗೆಲುವಿನೊಂದಿಗೆ ಆಡಿರುವ 14 ಪಂದ್ಯಗಳಲ್ಲಿ ಒಂಬತ್ತು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ 19 ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು.
ಪಂಜಾಬ್ ಕಿಂಗ್ಸ್ ಅಷ್ಟೇ ಅಂಕಗಳನ್ನು ಹೊಂದಿದ್ದರೂ ಉತ್ತಮ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನ ಪಡೆಯಿತು. ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದೇ 29ರಂದು ನಡೆಯುವ ಮೊದಲ ಕ್ವಾಲಿಫೈಯರ್‌ನಲ್ಲಿ ಎದುರಾಗಲಿವೆ.
ಬಳಿಕ ಶುಕ್ರವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ. ಗುಜರಾತ್ 14 ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಮೂರನೇ ಸ್ಥಾನ ಹಾಗೂ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು.
ಜಿತೇಶ್ ಶರ್ಮಾ, ಮಯಂಕ್ ಅಗರವಾಲ್ ಸಂಭ್ರಮ
ರನ್ ಬೇಟೆಯಲ್ಲಿ ಆರ್‌ಸಿಬಿ ದಾಖಲೆ...
2011ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೌತ್ ಆಸ್ಟ್ರೇಲಿಯಾ ವಿರುದ್ಧ 215 ರನ್ ಬೆನ್ನಟ್ಟಿರುವುದು ಆರ್‌ಸಿಬಿಯ ಇದುವರೆಗಿನ ಗರಿಷ್ಠ ಚೇಸಿಂಗ್ ದಾಖಲೆಯಾಗಿತ್ತು. ಈಗ 228 ರನ್ ಚೇಸ್ ಮಾಡುವ ಮೂಲಕ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡಿತು.
ಇನ್ನು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಮೂರನೇ ಗರಿಷ್ಠ ಚೇಸ್ ಎಂಬ ಖ್ಯಾತಿಗೂ ಪಾತ್ರವಾಯಿತು. ಕಳೆದ ವರ್ಷ ಕೆಕೆಆರ್ ವಿರುದ್ಧ ಪಂಜಾಬ್ 262 ರನ್ ಬೆನ್ನಟ್ಟಿರುವುದು ಐಪಿಎಲ್‌ನ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ಹಾಗೆಯೇ ಪ್ರಸಕ್ತ ಸಾಲಿನಲ್ಲೇ ಹೈದರಾಬಾದ್, ಪಂಜಾಬ್ ಕಿಂಗ್ಸ್ ವಿರುದ್ಧ 246 ರನ್ ಬೆನ್ನಟ್ಟಿತ್ತು.
ತವರಿನಾಚೆ ಎಲ್ಲ ಏಳು ಪಂದ್ಯಗಳಲ್ಲಿ ಗೆಲುವು...
ಪ್ರಸಕ್ತ ಸಾಲಿನಲ್ಲಿ ತವನರಿನಾಚೆ ಆಡಿದ ಎಲ್ಲ ಏಳು ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿತು. ಇದು ಐಪಿಎಲ್ ಆವೃತ್ತಿಯೊಂದರಲ್ಲಿ ತಂಡವೊಂದರ ಶ್ರೇಷ್ಠ ದಾಖಲೆಯಾಗಿದೆ. 2012ರಲ್ಲಿ ಕೆಕೆಆರ್ ಎಂಟು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿತ್ತು.
ಈ ವರ್ಷ ಲಖನೌದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋತರೂ ಅದು ಆರ್‌ಸಿಬಿ ಪಾಲಿಗೆ ತವರಿನ ಪಂದ್ಯವಾಗಿತ್ತು.
ಪಂತ್ 2ನೇ ಶತಕ...
ಟೂರ್ನಿಯುದ್ಧಕ್ಕೂ ಕಳಪೆ ಲಯದಿಂದ ಬಳಲುತ್ತಿದ್ದ ಲಖನೌ ನಾಯಕ ಪಂತ್ ಕೊನೆಗೂ ಭರ್ಜರಿ ಶತಕ ಸಾಧನೆ ಮಾಡಿದರು. ಪಂತ್ ಶತಕ 54 ಎಸೆತಗಳಲ್ಲಿ ದಾಖಲಾಯಿತು. ಅಲ್ಲದೆ ಐಪಿಎಲ್ ವೃತ್ತಿ ಜೀವನದಲ್ಲಿ 2ನೇ ಶತಕದ ಸಾಧನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.