ADVERTISEMENT

ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ ಹಣಾಹಣಿ

ಚಾಂಪಿಯನ್ ಮುಂಬೈ ಎದುರು ಜಯದ ಛಲದಲ್ಲಿ ಬೆಂಗಳೂರು

ಪಿಟಿಐ
Published 27 ಸೆಪ್ಟೆಂಬರ್ 2020, 20:00 IST
Last Updated 27 ಸೆಪ್ಟೆಂಬರ್ 2020, 20:00 IST
ಜಸ್‌ಪ್ರೀತ್ ಬೂಮ್ರಾ
ಜಸ್‌ಪ್ರೀತ್ ಬೂಮ್ರಾ   

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಸೋಮವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದಾರೆ.

ಆರ್‌ಸಿಬಿ ತಂಡವು ನಾಲ್ಕು ದಿನಗಳ ಹಿಂದೆ ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಎದುರು 97 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಕೈಬಿಟ್ಟ ಎರಡು ಕ್ಯಾಚ್‌ಗಳಿಂದಾಗಿ ರಾಹುಲ್ ಅಬ್ಬರದ ಶತಕ ಬಾರಿಸಿದ್ದರು.

ಆದರೆ, ಬೆಂಗಳೂರು ತಂಡದ ವೇಗದ ಬೌಲಿಂಗ್ ವಿಭಾಗದ ವೈಫಲ್ಯ ಮತ್ತು ವಿರಾಟ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯವೂ ಸೋಲಿಗೆ ಕಾರಣವಾಗಿತ್ತು. ಅನುಭವಿ ಬೌಲರ್‌ಗಳಾದ ಡೇಲ್ ಸ್ಟೇಯ್ನ್‌ ಮತ್ತು ಉಮೇಶ್ ಯಾದವ್ ಒಟ್ಟು ಏಳು ಓವರ್‌ಗಳಲ್ಲಿ 92 ರನ್‌ಗಳನ್ನು ಕೊಟ್ಟಿದ್ದರು. ಮಧ್ಯಮವೇಗಿಗಳಾದ ನವದೀಪ್ ಸೈನಿ ಕೂಡ ದುಬಾರಿಯಾಗಿದ್ದರು. ಆದರೆ ದುಬೆ ಎರಡು ವಿಕೆಟ್‌ ಕೂಡ ಪಡೆದಿದ್ದರು. ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಅವರು ತಕ್ಕಮಟ್ಟಿಗೆ ಉತ್ತಮವಾಗಿ ಬೌಲಿಂಗ್ ಮಾಡಿದ್ದರು.

ADVERTISEMENT

206 ರನ್‌ಗಳ ಗುರಿ ತಲುಪುವ ದಾರಿಯಲ್ಲಿ ವಿರಾಟ್ ಮತ್ತು ಉಳಿದ ಬ್ಯಾಟ್ಸ್‌ಮನ್‌ಗಳು ಹೋರಾಟವನ್ನೇ ತೋರದಿರುವುದು ಸೋಜಿಗಕ್ಕೆ ಕಾರಣವಾಗಿತ್ತು. ಕಳೆದೆರಡೂ ಪಂದ್ಯಗಳಲ್ಲಿ ವಿರಾಟ್ (14 ಮತ್ತು 1) ಬ್ಯಾಟ್‌ನಿಂದ ರನ್‌ಗಳು ಹರಿದಿಲ್ಲ. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯಗೊಳಿಸಿಕೊಂಡಿದ್ದರು. ಆದರೆ ಕಿಂಗ್ಸ್‌ ಎದುರು ಅವರೂ ವೈಫಲ್ಯ ಅನುಭವಿಸಿದ್ದರು. ಎಬಿ ಡಿವಿಲಿಯರ್ಸ್ 28 ರನ್‌ ಗಳಿಸಿದ್ದರು. ಫಿಂಚ್, ಸುಂದರ್ ಮತ್ತು ದುಬೆ ತುಸು ಹೋರಾಟ ತೋರಿದ್ದರು.

ಅನುಭವಿ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಅವರಿಗೆ ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿಲ್ಲ. ಈ ಪಂದ್ಯದಲ್ಲಿ ಅಂತಿಮ ಹನ್ನೊಂದರಲ್ಲಿ ಸ್ಥಾನ ಸಿಕ್ಕರೆ ಬ್ಯಾಟಿಂಗ್ ಬಲ ಕೂಡ ಹೆಚ್ಚಬಹುದು. ಅವರಿಗಾಗಿ ಜೋಶ್ ಫಿಲಿಪ್ ಜಾಗ ಖಾಲಿ ಮಾಡಬೇಕಾಗಬಹುದು. ಆಲ್‌ರೌಂಡರ್‌ಗಳಾದ ಪವನ್ ದೇಶಪಾಂಡೆ, ಗುರುಕೀರತ್ ಸಿಂಗ್ ಕೂಡ ಅವಕಾಶದ ನೀರಿಕ್ಷೆಯಲ್ಲಿದ್ದಾರೆ.

ಆದರೆ ಮುಂಬೈ ತಂಡದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಎದುರು ಸೋತಿದ್ದ, ಮುಂಬೈ ಎರಡನೇ ಪಂದ್ಯದಲ್ಲಿ ಪುಟಿದೇದಿತ್ತು. ಅದಕ್ಕೆ ಕಾರಣ ರೋಹಿತ್ ಶರ್ಮಾ (80 ರನ್) ಮತ್ತು ಸೂರ್ಯಕುಮಾರ್ ಯಾದವ್ (47 ರನ್) ಅವರ ಬ್ಯಾಟಿಂಗ್. ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ ಮತ್ತು ಕೃಣಾಲ್ ಪಾಂಡ್ಯ ಕೂಡ ರನ್‌ಗಳನ್ನು ಹರಿಸಬಲ್ಲ ಆಟಗಾರರು.

’ಡೆತ್ ಓವರ್‌’ ಪರಿಣತ ಜಸ್‌ಪ್ರೀತ್ ಬೂಮ್ರಾ, ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್‌ ಲಯಕ್ಕೆ ಮರಳಿರುವುದು ಮುಂಬೈ ತಂಡದ ಬಲ ಹೆಚ್ಚಿಸಿದೆ. ಅದರಿಂದಾಗಿ ಆರ್‌ಸಿಬಿ ಬ್ಯಾಟಿಂಗ್‌ ಪಡೆಯು ಎಚ್ಚರಿಕೆಯಿಂದ ಆಡಬೇಕಾದ ಸವಾಲು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.