ADVERTISEMENT

ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಇದೆ: ಮಯಂಕ್ ಅಗರವಾಲ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 21:46 IST
Last Updated 19 ಮಾರ್ಚ್ 2022, 21:46 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ನವದೆಹಲಿ: ‘ನಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಇದೆ. ಆದರೆ ಬಳಗದಲ್ಲಿರುವ ನಾವೆಲ್ಲರೂ ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ‘ ಎಂದು ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಂಕ್ ಅಗರವಾಲ್ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ವರ್ಷಗಳಿಂದ ಪಂಜಾಬ್ ತಂಡದಲ್ಲಿರುವ ಮಯಂಕ್ ಈ ಬಾರಿ ಪೂರ್ಣಾವಧಿ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಮೊದಲು ಪಂಜಾಬ್ ತಂಡದ ನಾಯಕರಾಗಿದ್ದ ಕೆ.ಎಲ್. ರಾಹುಲ್ ಲಖನೌ ತಂಡ ಸೇರಿದ್ದಾರೆ. ಅದರಿಂದಾಗಿ ಮಯಂಕ್ ಅವರಿಗೆ ನಾಯಕತ್ವದ ಹೊಣೆ ಬಿದ್ದಿದೆ.

ಐಪಿಎಲ್‌ನಲ್ಲಿ ಕಳೆದ ಎರಡು ವರ್ಷ ಒಟ್ಟು 400 ರನ್‌ಗಳನ್ನು ಮಯಂಕ್ ಗಳಿಸಿದ್ದಾರೆ. ಅವರು ಮತ್ತು ರಾಹುಲ್ ಪಂಜಾಬ್ ತಂಡದ ಇನಿಂಗ್ಸ್‌ ಆರಂಭಿಸುತ್ತಿದ್ದರು. ಈ ಬಾರಿ ಅನುಭವಿ ಶಿಖರ್ ಧವನ್ ಅವರೊಂದಿಗೆ ಮಯಂಕ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ADVERTISEMENT

ತಂಡದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೆಸ್ಟೊ ಮತ್ತು ಒಡೇನ್ ಸ್ಮಿತ್ ಇದ್ದಾರೆ. ತಮಿಳುನಾಡಿದ ಬೀಸು ಹೊಡೆತಗಳ ಬ್ಯಾಟರ್ ಶಾರೂಕ್ ಖಾನ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

‘ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ತಂಡವನ್ನು ಕಟ್ಟುವ ಕೆಲಸ ಯಶಸ್ವಿಯಾಗಿ ನಡೆದಿದೆ. ಮುಂಬೈನ ವಾತಾವರಣದಲ್ಲಿ ಆಡಲು ಬೇಕಾದ ಮಹತ್ವದ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಶಿಖರ್ ಅವರಂತಹ ಅನುಭವಿ ಮತ್ತು ಪ್ರತಿಭಾನ್ವಿತ ಬ್ಯಾಟರ್ ಇರುವುದು ತಂಡದ ಬಲ ಹೆಚ್ಚಿಸಿದೆ. ಅತ್ಯಂತ ಚುರುಕಿನ ಆಟಗಾರ, ಅಭಿಮಾನಿಗಳನ್ನು ತಮ್ಮ ಆಟದ ಮೂಲಕ ಮನರಂಜಿಸುವ ಆಟಗಾರ. ಅವರಿಂದಾಗಿ ತಂಡದಲ್ಲಿಯೂ ಲವಲವಿಕೆಯ ವಾತಾವರಣ ನೆಲೆ ಮಾಡಿದೆ’ ಎಂದು ಮಯಂಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.