ADVERTISEMENT

ಐಪಿಎಲ್‌ ವೇಳೆ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಲೀಗ್ ನಡೆಸಲು ಬಿಸಿಸಿಐ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 16:28 IST
Last Updated 8 ಫೆಬ್ರುವರಿ 2019, 16:28 IST

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಈ ಬಾರಿಯ ಐಪಿಎಲ್‌ ವೇಳೆ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಲೀಗ್ ನಡೆಸಲು ಚಿಂತಿಸಿದೆ.

ಪುರುಷರಂತೆ ಮಹಿಳೆಯರ ಐಪಿಎಲ್‌ ನಡೆಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಬಿಸಿಸಿಐ ಕೂಡಾ ಒಲವು ಹೊಂದಿದೆ. ಫ್ರಾಂಚೈಸ್‌ಗಳು ಮತ್ತು ಪ್ರಾಯೋಜಕರ ನಿರಾಸಕ್ತಿಯಿಂದಾಗಿ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಮಹಿಳಾ ಐಪಿಎಲ್‌ ಅನ್ನು ಉತ್ತೇಜಿಸುವ ಉದ್ದೇಶದಿಂದ ಬಿಸಿಸಿಐ ಹೋದ ವರ್ಷ ಪ್ರದರ್ಶನ ಪಂದ್ಯವೊಂದನ್ನು ಏರ್ಪಡಿಸಿತ್ತು. ಐಪಿಎಲ್‌ ಟ್ರಯಲ್‌ಬ್ಲೇಜರ್ಸ್‌ ಮತ್ತು ಐಪಿಎಲ್‌ ಸೂಪರ್‌ನೋವಾ ತಂಡಗಳು ಆ ಪಂದ್ಯದಲ್ಲಿ ಹೋರಾಡಿದ್ದವು. ಮಿಥಾಲಿ ರಾಜ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಅವರು ಈ ತಂಡಗಳ ಸಾರಥ್ಯ ವಹಿಸಿದ್ದರು. ಇದರಲ್ಲಿ ವಿದೇಶಿ ಆಟಗಾರ್ತಿಯರೂ ಆಡಿದ್ದರು.

ADVERTISEMENT

ಅದೇ ರೀತಿ ಈ ಸಲ ಏಳು ಇಲ್ಲವೇ 10 ದಿನಗಳ ಕಾಲ ಲೀಗ್‌ ನಡೆಸಲು ಬಿಸಿಸಿಐ ಚಿಂತಿಸಿದೆ. ಇದರಲ್ಲಿ ಮೂರು ತಂಡಗಳು ಭಾಗವಹಿಸಲಿವೆ.

‘ಈ ಬಾರಿಯ ಐಪಿಎಲ್‌ ವೇಳೆ ಮಹಿಳಾ ಟ್ವೆಂಟಿ–20 ಲೀಗ್‌ನ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಚುನಾವಣಾ ಆಯೋಗ ಮತ್ತು ಕೇಂದ್ರ ಗೃಹ ಸಚಿವಾಲಯದಿಂದ ನಿರಾಪೇಕ್ಷಣಾ ಪತ್ರ ಲಭಿಸಿದ ಕೂಡಲೇ ದಿನಾಂಕವನ್ನು ಪ್ರಕಟಿಸಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಬಾರಿ ಸ್ಮೃತಿ ಮಂದಾನ, ಹರ್ಮನ್‌ ಪ್ರೀತ್‌ ಮತ್ತು ಮಿಥಾಲಿ ರಾಜ್‌ ಅವರು ತಂಡಗಳನ್ನು ಮುನ್ನಡೆಸುವ ಸಾಧ್ಯತೆ ಇದೆ. ಮೂರು ತಂಡಗಳು ತಲಾ ಒಮ್ಮೆ ಮುಖಾಮುಖಿಯಾಗಲಿವೆ. ಅಗ್ರ ಎರಡು ಸ್ಥಾನ ಗಳಿಸುವ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ.

ಫ್ರಾಂಚೈಸ್‌ಗಳು ಮತ್ತು ಪ್ರಾಯೋಜಕರನ್ನು ಸೆಳೆಯಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಬಹುಮಾನ ಮೊತ್ತ, ವಿದೇಶಿ ಆಟಗಾರ್ತಿಯರ ಪಂದ್ಯದ ಸಂಭಾವನೆ ಮತ್ತು ಇತರೆ ವೆಚ್ಚವನ್ನು ಮಂಡಳಿಯೇ ಭರಿಸಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.