ADVERTISEMENT

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಹಾರ್ದಿಕ್ ಆಡಿದರೆ ಭಾರತಕ್ಕೆ ಅನುಕೂಲ

ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯ

ಪಿಟಿಐ
Published 7 ಜೂನ್ 2020, 21:00 IST
Last Updated 7 ಜೂನ್ 2020, 21:00 IST
ಇಯಾನ್ ಚಾಪೆಲ್
ಇಯಾನ್ ಚಾಪೆಲ್   

ಮೆಲ್ಬರ್ನ್: ಡಿಸೆಂಬರ್‌ ತಿಂಗಳಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಆಡಿದರೆ ಭಾರತ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಇಯಾನ್ ಚಾಪೆಲ್ ಹೇಳಿದ್ದಾರೆ.

2018ರಿಂದ ಟೆಸ್ಟ್‌ ಪಂದ್ಯದಲ್ಲಿ ಹಾರ್ದಿಕ್ ಆಡಿಲ್ಲ. ಹೋದ ವರ್ಷ ವಿಶ್ವಕಪ್ ನಂತರ ಬೆನ್ನುನೋವಿನ ಚಿಕಿತ್ಸೆಗೊಳಗಾಗಿದ್ದ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದಾರೆ.

‘ಹಾರ್ದಿಕ್ ಆಡುವುದರಿಂದ ಭಾರತ ತಂಡದಲ್ಲಿ ಒಬ್ಬ ಹೆಚ್ಚುವರಿ ಮಧ್ಯಮವೇಗಿ ಲಭಿಸಿಂದತಾಗುತ್ತದೆ. ಇದರಿಂದ ತಂಡದ ಉಳಿದ ಮಧ್ಯಮವೇಗಿಗಳಿಗೆ ತುಸು ವಿಶ್ರಾಂತಿ ಸಿಗುತ್ತದೆ. ತಂಡಕ್ಕೆ ಅದರಿಂದ ಲಾಭ ಹೆಚ್ಚು’ ಎಂದು ಚಾಪೆಲ್ ಹೇಳಿದ್ದಾರೆ.

ADVERTISEMENT

‘ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಪಾಂಡ್ಯ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಆಗ ಅವರು ನಾಲ್ಕನೇ ಪಂದ್ಯ ನಡೆಯುವ ಎಸ್‌ಸಿಜಿಯಲ್ಲಿ ಮೂರನೇ ಮಧ್ಯಮವೇಗಿಯಾಗಿ ಇಳಿಯುವ ಅವಕಾಶ ಗಿಟ್ಟಿಸುವ ಸಾಧ್ಯತೆ ಇದೆ. ಆಗ ಮತ್ತೊಬ್ಬ ಸ್ಪಿನ್ನರ್‌ಗೆ ಆಡಿಸಿದರೆ ಪ್ಲಸ್‌ ಪಾಯಿಂಟ್’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಆರನೇ ಸ್ಥಾನದಲ್ಲಿ ರಿಷಭ್ ಪಂತ್ ಇದ್ದಾರೆ. ಇದರಿಂದ ಕೆಳಮಧ್ಯಮಕ್ರಮಾಂಕದ ಬಲ ಹೆಚ್ಚುವುದು. ಸ್ಪಿನ್ನರ್‌ಗಳ ಆಯ್ಕೆಯಲ್ಲಿ ಭಾರತದ ಆಯ್ಕೆ ಸಮಿತಿಗೆ ಕಠಿಣ ಸವಾಲು ಇದೆ. ಆಫ್‌ಸ್ಪಿನ್ನರ್ ಆರ್. ಅಶ್ವಿನ್, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಅವರಲ್ಲಿ ಆಯ್ಕೆ ಮಾಡುವುದು ಕಠಿಣ’ ಎಂದಿದ್ದಾರೆ.

‘ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆಯು ಬಹಳ ಬಲಿಷ್ಠವಾಗಿದೆ. ಡೇವಿಡ್ ವಾರ್ನ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್ ಅವರನ್ನು ಕಟ್ಟಿಹಾಕುವುದು ಭಾರತಕ್ಕೆ ದೊಡ್ಡ ಸವಾಲು. ಇತ್ತೀಚಿನ ವರ್ಷಗಳಲ್ಲಿ ಈ ಮೂವರು ಬ್ಯಾಟ್ಸ್‌ಮನ್‌ಗಳ ಕಾಣಿಕೆ ದೊಡ್ಡದು’ ಎಂದು ಚಾಪೆಲ್ ಹೇಳಿದ್ದಾರೆ.

‘ಬೌಲಿಂಗ್‌ನಲ್ಲಿಯೂ ಆಸ್ಟ್ರೇಲಿಯಾ ಬಲಾಢ್ಯವಾಗಿದೆ. ವೇಗಿಗಳಾದ ಪ್ಯಾಟ್ ಕಮಿನ್ಸ್‌, ಮಿಷೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಜೇಮ್ಸ್‌ ಪ್ಯಾಟಿನ್ಸನ್ ಅವರ ಅಮೋಘ ಲಯದಲ್ಲಿದ್ದಾರೆ. ಅಲ್ಲದೇ ಚಾಣಾಕ್ಷ ಸ್ಪಿನ್ನರ್ ನೇಥನ್ ಲಯನ್ ಇದ್ದಾರೆ. ಆದ್ದರಿಂದ ತಂಡವು ಬಹಳಷ್ಟು ಸಮತೋಲನದಿಂದ ಕೂಡಿದೆ’ ಎಂದಿದ್ದಾರೆ.

2018–19ರಲ್ಲಿ ವಿರಾಟ್ ಕೊಹ್ಲಿ ಬಳಗವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.