ADVERTISEMENT

‘ದ್ವಿಪಕ್ಷೀಯ ಕ್ರಿಕೆಟ್‌ ಸರಣಿ: ಮಾತುಕತೆ ಅಗತ್ಯವಿದೆ’

ಸಮಸ್ಯೆ ಬಗೆಹರಿಸಿಕೊಂಡರೆ ವಿಶ್ವ ಕ್ರಿಕೆಟ್‌ ಜಗತ್ತಿನಲ್ಲಿ ಭಾರತ–ಪಾಕ್‌ ಮಿಂಚಬಹುದು: ಜಾವೇದ್‌ ಮಿಯಾಂದಾದ್

ಪಿಟಿಐ
Published 4 ಜುಲೈ 2018, 19:22 IST
Last Updated 4 ಜುಲೈ 2018, 19:22 IST
ಜಾವೇದ್‌ ಮಿಯಾಂದಾದ್‌
ಜಾವೇದ್‌ ಮಿಯಾಂದಾದ್‌   

ಕರಾಚಿ: ‘ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ನಿಂತುಹೋಗಿರುವ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯ ಪುನರ್‌ ಆಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹಾಗೂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗಳು ಮಾತುಕತೆಗೆ ಮುಂದಾಗಬೇಕು’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಹೇಳಿದ್ದಾರೆ.

‘ಒಂದೇ ವೇದಿಕೆಯಲ್ಲಿ ಉಭಯ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಈ ಬಗ್ಗೆ ಚರ್ಚೆ ನಡೆಸಲು ಸೂಕ್ತ ಸಮಯ. ತಮ್ಮ ಸರ್ಕಾರಗಳ ಮನವೊಲಿಸಲು ಬಿಸಿಸಿಐ ಹಾಗೂ ಪಿಸಿಬಿ ಮುಂದಾಗಬೇಕು. ಇದಕ್ಕಾಗಿ ಜಂಟಿಯಾಗಿ ಕೆಲಸ ಮಾಡುವುದು ಅಗತ್ಯ’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಎರಡೂ ತಂಡಗಳು ಅನೇಕ ಪ್ರತಿಭಾನ್ವಿತ ಯುವ ಆಟಗಾರರನನ್ನು ಹೊಂದಿವೆ. ಸಕಲ ರೀತಿಯಲ್ಲೂ ಉತ್ತಮವಾಗಿರುವ ತಂಡಗಳು ಕ್ರಿಕೆಟ್‌ ಸರಣಿ ಆಡದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಎರಡೂ ದೇಶಗಳ ನಡುವಿನ ಕ್ರಿಕೆಟ್‌ ಸಂಬಂಧವನ್ನೂ ಬೆಳೆಸುವ ನಿಟ್ಟಿನಲ್ಲಿ ಐಸಿಸಿ ನೆರವಾಗಬಹುದೆಂಬ ನಿರೀಕ್ಷೆಯೂ ತಮಗಿಲ್ಲ ಎಂದಿರುವ ಜಾವೇದ್‌, ‘ಉಭಯ ರಾಷ್ಟ್ರಗಳು ಕ್ರಿಕೆಟ್‌ ಸರಣಿ ಆಡದೇ ಇರುವುದರಿಂದ ಅಂತರರಾಷ್ಟ್ರೀ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಯೋಜಿಸುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಹಾಗೂ ಇನ್ನಿತರ ಲೀಗ್‌ಗಳಿಗೆ ಯಾವುದೇ ಅರ್ಥವಿಲ್ಲ’ ಎಂದು ಕಿಡಿಕಾರಿದ್ದಾರೆ.

2008ರ ಮುಂಬೈ ಮೇಲಿನ ಭಯೋತ್ಪಾದನೆಯ ದಾಳಿಯ ನಂತರ ಉಭಯ ದೇಶಗಳ ನಡುವಣ ಯಾವುದೇ ಕ್ರಿಕೆಟ್‌ ಸರಣಿಗಳು ನಡೆದಿಲ್ಲ. ಗಡಿಯಲ್ಲಿನ ಗುಂಡಿನ ದಾಳಿ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ನಿಲ್ಲಿಸುವವರೆಗೂ ಕ್ರಿಕೆಟ್‌ ಸರಣಿ ಆಯೋಜಿಸಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

‘ಎರಡೂ ರಾಷ್ಟ್ರಗಳ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಹಿಂದೆಲ್ಲ ಅನೇಕ ಸರಣಿಗಳನ್ನು ಆಯೋಜಿಸಲಾಗುತ್ತಿತ್ತು. ಇದರಿಂದ ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳು ಪ್ರಯೋಜನ ಪಡೆದಿವೆ. ಉಭಯ ರಾಷ್ಟ್ರಗಳ ಮಧ್ಯೆ ನಡೆಯುವ ಸರಣಿಯು ಆ್ಯಷಸ್‌ ಸರಣಿಗಿಂತ ದೊಡ್ಡದು. ನಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ವಿಶ್ವ ಕ್ರಿಕೆಟ್‌ ಜಗತ್ತನ್ನು ಆಳಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್‌ ಆಟವು ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆ ಬಗೆಹರಿಸುವಲ್ಲಿ ನೆರವಾಗಲಿದೆ ಎಂದಿರುವ ಅವರು, ‘ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ ಹಾಗೂ ಏಷ್ಯಾ ಕಪ್‌ ಟೂರ್ನಿಗಳಲ್ಲಿ ಈ ರಾಷ್ಟ್ರಗಳು ಪಂದ್ಯ ಆಡಬಹುದಾದರೆ ದ್ವಿಪಕ್ಷೀಯ ಸರಣಿ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.