
ಹರ್ಮನ್‌ಪ್ರೀತ್ ಕೌರ್
ಜೈಪುರ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಮೇಣದ ಪ್ರತಿಮೆಯನ್ನು ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಈ ಮೂಲಕ ಹರ್ಮನ್‌ಪ್ರೀತ್ ಕೌರ್ ಅವರು ಪ್ರತಿಷ್ಠಿತರ ಸಾಲಿಗೆ ಸೇರಲಿದ್ದಾರೆ. ಮಹಾತ್ಮ ಗಾಂಧೀಜಿ, ಮಹಾರಾಣ ಪ್ರತಾಪ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮದರ್ ತೆರೇಸಾ, ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್ ಹಾಗೂ ಸಂದೀಪ್ ಸಿಂಗ್ ಮುಂತಾದವರ ಪ್ರತಿಮೆಯನ್ನು ಈಗಾಗಲೇ ಇಲ್ಲಿ ಸ್ಥಾಪಿಸಲಾಗಿದೆ.
ಪ್ರತಿಮೆಯನ್ನು ರಚಿಸುವ ಸಲುವಾಗಿ ನಮ್ಮ ತಂಡವು ಕೌರ್ ಅವರನ್ನು ಭೇಟಿಯಾಗಿ ದೇಹದ ಅಳತೆ ಸೇರಿದಂತೆ ಫೋಟೊ ಮತ್ತು ವಿಡಿಯೊವನ್ನು ಚಿತ್ರೀಕರಿಸಿದೆ ಎಂದು ವಸ್ತು ಸಂಗ್ರಹಾಲಯದ ಸಂಸ್ಥಾಪಕ ಅನೂಪ್ ಶ್ರೀವಾಸ್ತವ ತಿಳಿಸಿದ್ದಾರೆ.
ಕೌರ್ ಅವರು ಮೇಣದ ಪ್ರತಿಮೆ ತಯಾರಿಕೆಯ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು. ಹಾಗೆಯೇ ತಮ್ಮ ಮೇಣದ ಪ್ರತಿಮೆ ಸ್ಥಾಪಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಕುಟುಂಬಸ್ಥರೊಂದಿಗೆ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಕೌರ್ ಅವರ ವ್ಯಕ್ತಿತ್ವವು ಯುವತಿಯರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಗಮನಾರ್ಹ ಪರಿಣಾಮ ಬೀರುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.