ADVERTISEMENT

ಯಶಸ್ವಿ ಜೈಸ್ವಾಲ್ 40ಕ್ಕೂ ಅಧಿಕ ಶತಕ ಗಳಿಸಬಲ್ಲರು: ಮ್ಯಾಕ್ಸ್‌ವೆಲ್ ಭವಿಷ್ಯ

ಪಿಟಿಐ
Published 27 ನವೆಂಬರ್ 2024, 12:32 IST
Last Updated 27 ನವೆಂಬರ್ 2024, 12:32 IST
<div class="paragraphs"><p>ಯಶಸ್ವಿ ಜೈಸ್ವಾಲ್</p></div>

ಯಶಸ್ವಿ ಜೈಸ್ವಾಲ್

   

(X/@BCCI)

ಸಿಡ್ನಿ: ಭಾರತ ಕ್ರಿಕೆಟ್ ತಂಡದ ಯುವ ಪ್ರತಿಭಾವಂತ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೊಗಳಿದ್ದಾರೆ.

ADVERTISEMENT

'ವಿಭಿನ್ನ ಪರಿಸ್ಥಿತಿಯಲ್ಲಿ ಬೇಗನೇ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಜೈಸ್ವಾಲ್ ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನ ದೌರ್ಬಲ್ಯಗಳು ಕಾಣಿಸುತ್ತಿಲ್ಲ. ಈ ಯುವ ಆಟಗಾರ 40ಕ್ಕೂ ಅಧಿಕ ಶತಕಗಳನ್ನು ಗಳಿಸಬಹುದು. ಅನೇಕ ದಾಖಲೆಗಳನ್ನು ಸೃಷ್ಟಿಸಲಿದ್ದಾರೆ' ಎಂದು ಮ್ಯಾಕ್ಸ್‌ವೆಲ್ ಭವಿಷ್ಯ ನುಡಿದಿದ್ದಾರೆ.

'ಚೆಂಡನ್ನು ರಕ್ಷಣಾತ್ಮಕವಾಗಿ ಹಾಗೂ ಆಕ್ರಮಣಕಾರಿಯಾಗಿ ಆಡುವ ರೀತಿ, ಫೂಟ್‌ವರ್ಕ್ ಎಲ್ಲವೂ ಪ್ರಭಾವಿ ಎನಿಸಿವೆ. ಜೈಸ್ವಾಲ್ ಬ್ಯಾಟಿಂಗ್ ಶೈಲಿಯಲ್ಲಿ ಹೆಚ್ಚಿನ ದೌರ್ಬಲ್ಯಗಳು ಕಾಣುತ್ತಿಲ್ಲ. ಶಾರ್ಟ್ ಬಾಲ್ ಚೆನ್ನಾಗಿ ಆಡುತ್ತಾರೆ. ಡ್ರೈವ್ ಅತ್ಯುತ್ತಮವಾಗಿದೆ. ಸ್ಪಿನ್ ಹಾಗೂ ವೇಗದ ಬೌಲಿಂಗ್ ಉತ್ತಮವಾಗಿ ಆಡುತ್ತಾರೆ. ಒತ್ತಡವನ್ನು ನಿಭಾಯಿಸುವಲ್ಲಿ ಯಶ ಕಂಡಿದ್ದಾರೆ' ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.

22ರ ಹರೆಯದ ಜೈಸ್ವಾಲ್, ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು. ಅಲ್ಲದೆ ವೃತ್ತಿ ಜೀವನದ ಮೊದಲ ನಾಲ್ಕು ಶತಕಗಳಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿದ್ದಾರೆ.

ಜೈಸ್ವಾಲ್ ಈವರೆಗೆ ಆಡಿರುವ 15 ಟೆಸ್ಟ್ ಪಂದ್ಯಗಳಲ್ಲಿ 58.07ರ ಸರಾಸರಿಯಲ್ಲಿ 1,568 ರನ್ ಗಳಿಸಿದ್ದಾರೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.

ಅದೇ ವೇಳೆ ಜಸ್‌ಪ್ರೀತ್ ಬೂಮ್ರಾ ಸಾರ್ವಕಾಲಿಕ ಅತ್ಯುತ್ತಮ ವೇಗದ ಬೌಲರ್‌ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

'ನಾನು ಈ ಕುರಿತು ಹಿಂದೆಯೂ ಹೇಳಿದ್ದೇನೆ. ಜಸ್‌ಪ್ರೀತ್ ಬೂಮ್ರಾ ಅವರ ಸವಾಲನ್ನು ಎದುರಿಸುವುದು ತುಂಬಾನೇ ಕಠಿಣ. ಅವರೊಬ್ಬ ಸಂಪೂರ್ಣ ಪ್ಯಾಕೇಜ್ ಬೌಲರ್ ಆಗಿದ್ದಾರೆ' ಎಂದು ಗುಣಗಾನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.