ADVERTISEMENT

NZ VS WI: ಇನಿಂಗ್ಸ್ ಸೋಲು ತಪ್ಪಿಸಲು ಹೋರಾಟ ತೋರಿದ ಹೋಲ್ಡರ್‌

ಇನಿಂಗ್ಸ್ ಸೋಲು ತಪ್ಪಿಸಲು ವಿಂಡೀಸ್‌ಗೆ ಬೇಕಿದೆ 85 ರನ್‌

ಏಜೆನ್ಸೀಸ್
Published 13 ಡಿಸೆಂಬರ್ 2020, 7:20 IST
Last Updated 13 ಡಿಸೆಂಬರ್ 2020, 7:20 IST
ಜೇಸನ್‌ ಹೋಲ್ಡರ್‌
ಜೇಸನ್‌ ಹೋಲ್ಡರ್‌   

ವೆಲಿಂಗ್ಟನ್‌: ನ್ಯೂಜಿಲೆಂಡ್‌ ಉರಿ ದಾಳಿಯನ್ನು ದಿಟ್ಟವಾಗಿ ಎದುರಿಸಿದ ವೆಸ್ಡ್‌ ಇಂಡೀಸ್‌ ನಾಯಕ ಜೇಸನ್‌ ಹೋಲ್ಡರ್‌ ಅಜೇಯ ಅರ್ಧ ಶತಕವನ್ನು ಬಾರಿಸಿದರು. ಎರಡನೇ ಟೆಸ್ಟ್‌ನ ಮೂರನೇ ದಿನವಾದ ಭಾನುವಾರವೇ ಅತಿಥೇಯ ತಂಡದ ಗೆಲುವಿನ ದಾರಿಗೆ ಅವರು ತಡೆಗೋಡೆಯಾದರು.

ಮಂದ ಬೆಳಕಿನಿಂದ ದಿನದಾಟ ಒಂದು ಗಂಟೆ ಮೊದಲೇ ಕೊನೆಗೊಂಡಾಗ ವೆಸ್ಟ್ ಇಂಡೀಸ್‌ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 244 ರನ್‌ ಗಳಿಸಿತು. ಸರಣಿಯಲ್ಲಿ ಸತತ ಎರಡನೇ ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಬೇಕಾದರೆ ಕೆರೀಬಿಯನ್‌ ತಂಡ ಉಳಿದ ನಾಲ್ಕು ವಿಕೆಟ್‌ಗಳಿಂದ ಇನ್ನೂ 85 ರನ್‌ ಗಳಿಸಬೇಕಾಗಿದೆ.

ನಾಲ್ವರು ವೇಗಿಗಳ ದಾಳಿಯ ಮುಂದೆ ಬಸವಳಿದ ವೆಸ್ಟ್ ಇಂಡೀಸ್‌ ತಂಡ ದಿನದ ಮೊದಲ ಎರಡು ಅವಧಿಯ ಆಟದಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಯಲ್ಲಿತ್ತು. ಪಿಚ್‌ನಲ್ಲಿ ಚೆಂಡು ನೆಗೆತ ಮತ್ತು ಹೊರಳುವಿಕೆ ಕಾಣುತ್ತಿದ್ದು, ಕಿವೀಸ್‌ ಬೌಲರ್‌ಗಳು ಪ್ರವಾಸಿ ತಂಡಕ್ಕೆ ತಲೆನೋವಾಗಿದ್ದರು. ಆದರೆ ಚಹ ವಿರಾಮದ ನಂತರ ಹೋಲ್ಡರ್‌ ವಿಶ್ವಾಸದ ಪ್ರತೀಕವಾದರು. ಅವರ ಅಜೇಯ 60 ರನ್‌ಗಳ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌, ಎಂಟು ಬೌಂಡರಿಗಳು ಇವೆ. ಚೊಚ್ಚಲ ಪಂದ್ಯ ಆಡುತ್ತಿರುವ ಜೋಶುವ ಡ ಸಿಲ್ವ ಅಜೇಯ 25 ರನ್‌ ಗಳಿಸಿ, ನಾಯಕನಿಗೆ ಸಾಥ್‌ ನೀಡಿದ್ದಾರೆ. ಇವರಿಬ್ಬರು ಮುರಿಯದ ಏಳನೇ ವಿಕೆಟ್‌ಗೆ 74 ರನ್‌ಗಳು ಸೇರಿಸಿದ್ದಾರೆ.

ADVERTISEMENT

ವೆಸ್ಟ್‌ ಇಂಡೀಸ್‌ ಆರಂಭ ಆಟಗಾರ ಜಾನ್‌ ಕ್ಯಾಂಪ್‌ಬೆಲ್‌ ಎರಡನೇ ಇನಿಂಗ್ಸ್‌ನಲ್ಲಿ 68 ರನ್‌ ಬಾರಿಸಿದರು. ಆದರೆ ನ್ಯೂಜಿಲೆಂಡ್‌ನ ವಾತಾವರಣದಲ್ಲಿ ಇಂಥ ದಾಳಿ ಎದುರಿಸುವುದು ಸುಲಭವಲ್ಲ ಎಂದೂ ಹೇಳಿದರು. ‘ಇಂಥ ಪರಿಸ್ಥಿತಿಯಲ್ಲಿ ಆಡುವುದು ಕಷ್ಟ. ಪ್ರಸ್ತುತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಪಡೆ ಎದುರಾಳಿ ತಂಡದ್ದಾಗಿದ್ದು, ತವರಿನಲ್ಲಿ ಆಡುತ್ತಿರುವ ಲಾಭವೂ ಅವರಿಗಿದೆ’ ಎಂದರು.

ಇದಕ್ಕೆ ಮೊದಲು, ಬೆಳಿಗ್ಗೆ ಐದು ಓವರ್‌ಗಳ ಒಳಗೇ ವೆಸ್ಟ್‌ ಇಂಡೀಸ್‌ ಮೊದಲ ಇನಿಂಗ್ಸ್‌ನ ಕೊನೆಯ ಎರಡು ವಿಕೆಟ್‌ಗಳು ಬಿದ್ದು, 131 ರನ್‌ಗಳಿಗೆ ತಂಡ ಪತನ ಕಂಡಿತ್ತು. ಈ ಎರಡೂ ವಿಕೆಟ್‌ ಪಡೆದ ಟಿಮ್‌ ಸೌಥಿ 32 ರನ್‌ಗಳಿಗೆ 5 ವಿಕೆಟ್‌ನೊಡನೆ ಗಮನ ಸೆಳೆದರು. ಅಜಾನುಬಾಹು ಕೈಲ್‌ ಜೇಮಿಸನ್‌ 34 ರನ್‌ಗಳಿಗೆ ಉಳಿದ 5 ವಿಕೆಟ್‌ ಕಬಳಿಸಿದರು. ಮೂರನೇ ದಿನ ಅವರಿಗೆ ಬೌಲಿಂಗ್‌ ಮಾಡುವ ಪ್ರಮೇಯ ಬರಲಿಲ್ಲ.

329 ರನ್‌ಗಳಿಂದ ಹಿಂದುಳಿದು ಫಾಲೊಆನ್‌ಗೆ ಒಳಗಾದ ವೆಸ್ಟ್‌ ಇಂಡೀಸ್‌ ಲಂಚ್‌ ವೇಳೆಗೆ 2 ವಿಕೆಟ್‌ಗೆ 73 ರನ್‌ ಗಳಿಸಿತ್ತು. ಕ್ರೇಗ್‌ ಬ್ರಾಥ್‌ವೇಟ್‌ (4) ಮತ್ತು ಡಾರೆನ್‌ ಬ್ರಾವೊ (24) ಇಬ್ಬರೂ ಬೌಲ್ಟ್‌ಗೆ ಬಲಿಯಾಗಿದ್ದರು. ಕ್ಯಾಂಪ್‌ಬೆಲ್‌ ಜೊತೆಗೂಡಿದ ಶಮ್ರಾ ಬ್ರೂಕ್ಸ್‌ ಮೂರನೇ ವಿಕೆಟ್‌ಗೆ 89 ರನ್‌ ಸೇರಿಸಿದಾಗ ವೆಸ್ಟ್‌ ಇಂಡೀಸ್ ಆರಾಮವಾಗಿ ಚೇತರಿಸಿಕೊಳ್ಳುವಂತೆ ಕಂಡಿತ್ತು. ಆದರೆ ಮೂರು ರನ್‌ ಅಂತರದಲ್ಲಿ ಮೂರು ವಿಕೆಟ್‌ಗಳು ಉರುಳಿ, ಆತಿಥೇಯರು ಹಿಡಿತ ಸಾಧಿಸಿದರು. ಚಹ ವೇಳೆಗೆ ಸ್ಕೋರ್‌ 5 ವಿಕೆಟ್‌ಗೆ 158 ಆಗಿತ್ತು.

ಬೇಸಿನ್‌ ರಿಸರ್ವ್‌ ಮೇಲೆ ತಂಪಾದ ಗಾಳಿ ಹಾದುಹೋಗುತ್ತಿದ್ದು, 4,700 ಪ್ರೇಕ್ಷಕರು ತಮ್ಮ ತಂಡ ಬೇಗನೇ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಟೀ ನಂತರ ಜರ್ಮೇನ್‌ ಬ್ಲ್ಯಾಕ್‌ವುಡ್‌ ವಿಕೆಟ್‌ ಪಡೆಯವುದಕ್ಕೆ ಮಾತ್ರ ನ್ಯೂಜಿಲೆಂಡ್‌ ಸಮಾಧಾನಪಟ್ಟಿತು.

ಮೊದಲ ಇನಿಂಗ್ಸ್‌ನಲ್ಲಿ ಒಂದೂ ವಿಕೆಟ್‌ ಪಡೆಯದ ಬೌಲ್ಟ್‌ ಎರಡನೇ ಇನಿಂಗ್ಸ್‌ನಲ್ಲಿ 75 ರನ್ನಿಗೆ 3 ವಿಕೆಟ್‌ ಪಡೆದು ಯಶಸ್ವಿಯೆನಿಸಿದರು. ಜೇಮಿಸನ್‌ ಎರಡು ವಿಕೆಟ್‌ಗಳೊಡನೆ ಪಂದ್ಯದಲ್ಲಿ ಒಟ್ಟಾರೆ ಏಳು ವಿಕೆಟ್‌ ಗಳಿಸಿದ್ದಾರೆ.

ಸ್ಕೋರುಗಳು: ನ್ಯೂಜಿಲೆಂಡ್‌: 1ನೇ ಇನಿಂಗ್ಸ್‌: 460; ವೆಸ್ಟ್‌ ಇಂಡೀಸ್‌: 1ನೇ ಇನಿಂಗ್ಸ್‌: 131 ಮತ್ತು 2ನೇ ಇನಿಂಗ್ಸ್‌: 6 ವಿಕೆಟ್‌ಗೆ 244 (ಕ್ಯಾಂಪ್‌ಬೆಲ್‌ 68, ಬ್ರೂಕ್ಸ್‌ 34, ಹೋಲ್ಡರ್‌ ಬ್ಯಾಟಿಂಗ್‌ 60, ಜೋಶುವ ಡ ಸಿಲ್ವ ಬ್ಯಾಟಿಂಗ್‌25; ಬೌಲ್ಟ್‌ 75ಕ್ಕೆ3, ಜೇಮಿಸನ್‌ 43ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.