ADVERTISEMENT

ಕ್ರಿಕೆಟ್ ಆಸ್ಟ್ರೇಲಿಯಾದ ವರ್ಷದ ಟೆಸ್ಟ್ ಟೀಂಗೆ ಬೂಮ್ರಾ ನಾಯಕ; ಜೈಸ್ವಾಲ್ ಆರಂಭಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2025, 2:48 IST
Last Updated 1 ಜನವರಿ 2025, 2:48 IST
<div class="paragraphs"><p>ಯಶಸ್ವಿ ಜೈಸ್ವಾಲ್‌ ಹಾಗೂ ಜಸ್‌ಪ್ರಿತ್‌ ಬೂಮ್ರಾ</p></div>

ಯಶಸ್ವಿ ಜೈಸ್ವಾಲ್‌ ಹಾಗೂ ಜಸ್‌ಪ್ರಿತ್‌ ಬೂಮ್ರಾ

   

ಪಿಟಿಐ ಚಿತ್ರಗಳು

ಸಿಡ್ನಿ: 2024ರಲ್ಲಿ ವಿವಿಧ ದೇಶಗಳ ಆಟಗಾರರು ನೀಡಿದ ಪ್ರದರ್ಶನದ ಆಧಾರದ ಮೇಲೆ 'ವರ್ಷದ ಟೆಸ್ಟ್‌ ಕ್ರಿಕೆಟ್‌ ತಂಡ' ಕಟ್ಟಿರುವ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ), ಭಾರತದ ಸ್ಟಾರ್‌ ವೇಗಿ ಜಸ್‌ಪ್ರಿತ್‌ ಬೂಮ್ರಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಹಾಗೆಯೇ, ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರಿಗೂ ಸ್ಥಾನ ನೀಡಿದೆ.

ADVERTISEMENT

ವರ್ಷದುದ್ದಕ್ಕೂ ಟೆಸ್ಟ್‌ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಬೂಮ್ರಾ, 13 ಪಂದ್ಯಗಳ 26 ಇನಿಂಗ್ಸ್‌ಗಳಲ್ಲಿ 14.92ರ ಸರಾಸರಿಯೊಂದಿಗೆ ಬರೋಬ್ಬರಿ 71 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಎ, 'ಬೌಲರ್‌ ಒಬ್ಬರು ಕ್ಯಾಲೆಂಡರ್‌ ವರ್ಷದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಳಲ್ಲಿ ಇದೂ ಒಂದು. ಡೇಲ್‌ ಸ್ಟೇಯ್ನ್‌ ಅವರು 2008ರಲ್ಲಿ 74 ವಿಕೆಟ್‌ ಪಡೆದಿದ್ದನ್ನು ಬಿಟ್ಟರೆ, ಈವರೆಗೆ ಯಾವುದೇ ವೇಗದ ಬೌಲರ್‌ ಇಂತಹ ಸಾಧನೆ ಮಾಡಿರಲಿಲ್ಲ. ಹಾಗೆಯೇ, 1982ರಿಂದ ಈಚೆಗೆ ಇಮ್ರಾನ್‌ ಖಾನ್‌ ಅವರಷ್ಟು ಉತ್ತಮ ಸರಾಸರಿಯಲ್ಲಿ ಯಾವ ವೇಗಿಯೂ ಬೌಲಿಂಗ್‌ ಮಾಡಿರಲಿಲ್ಲ' ಎಂದು ತಿಳಿಸಿದೆ.

ಇಮ್ರಾನ್‌ ಅವರು 13.29ರ ಸರಾಸರಿಯಲ್ಲಿ 62 ವಿಕೆಟ್‌ಗಳನ್ನು ಪಡೆದಿದ್ದರು.

ಸದ್ಯದ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ ಆಸ್ಟ್ರೇಲಿಯಾನ್ನರಿಗೆ ಬಿಸಿ ಮುಟ್ಟಿಸಿರುವ ಬೂಮ್ರಾ, 2024ರ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಸರಣಿಯಲ್ಲಿ ಆಡಿದ 4 ಪಂದ್ಯಗಳಲ್ಲೇ 19 ವಿಕೆಟ್‌ ಉರುಳಿಸಿದ್ದರು ಎಂದು ಹೇಳಿದೆ.

ಬಾರ್ಡರ್-ಗವಾಸ್ಕರ್ ಟೂರ್ನಿಯ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಬೂಮ್ರಾ, ಕ್ರಿಕೆಟ್‌ ಆಸ್ಟ್ರೇಲಿಯಾದ ಟೆಸ್ಟ್‌ ತಂಡಕ್ಕೂ ನಾಯಕರಾಗಿದ್ದಾರೆ ಎಂದು ತಿಳಿಸಿದೆ. ಟೂರ್ನಿಯಲ್ಲಿ ಬೂಮ್ರಾ ಈವರಗೆ ಒಟ್ಟು 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಬೂಮ್ರಾ ಮಾತ್ರವಲ್ಲದೆ, 2024ರಲ್ಲಿ ಭಾರತ ಪರ ಗರಿಷ್ಠ ಸ್ಕೋರರ್‌ ಎನಿಸಿರುವ ಯಶಸ್ವಿ ಜೈಸ್ವಾಲ್‌ ಅವರೂ ಸಿಎ ತಂಡದಲ್ಲಿದ್ದಾರೆ.

ಜೈಸ್ವಾಲ್‌ 15 ಪಂದ್ಯಗಳ 29 ಇನಿಂಗ್ಸ್‌ಗಳಿಂದ 54.74ರ ಸರಾಸರಿಯಲ್ಲಿ 1,478 ರನ್‌ ಗಳಿಸಿದ್ದಾರೆ.

'ಭಾರತದ ಉದಯೋನ್ಮುಖ ಬ್ಯಾಟಿಂಗ್‌ ತಾರೆ, ಕೇವಲ 22 ವರ್ಷದ ಆಟಗಾರ ಶ್ರೇಷ್ಠ ಆಟವಾಡಿದ್ದಾರೆ. 2024ರ ಫೆಬ್ರುವರಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಬೆನ್ನು ಬೆನ್ನಿಗೆ ದ್ವಿಶತಕ ಗಳಿಸಿದ್ದ ಜೈಸ್ವಾಲ್‌, ಪರ್ತ್‌ (ಆಸ್ಟ್ರೇಲಿಯಾ ವಿರುದ್ಧ) ಟೆಸ್ಟ್‌ನಲ್ಲಿಯೂ ನಿರ್ಣಾಯಕ 161 ರನ್ ಬಾರಿಸಿದ್ದರು. ವರ್ಷವೊಂದರಲ್ಲಿ ಗರಿಷ್ಠ 36 ಸಿಕ್ಸರ್ ಸಿಡಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ' ಎಂದು ಉಲ್ಲೇಖಿಸಿದೆ.

ಕಳೆದ ವರ್ಷ ಆಡಿದ 9 ಟೆಸ್ಟ್‌ಗಳಲ್ಲಿ 37 ವಿಕೆಟ್‌ ಪಡೆದಿರುವ ಆಸಿಸ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರಿಗೆ ಸ್ಥಾನ ದೊರೆತಿಲ್ಲ.

ಕ್ರಿಕೆಟ್‌ ಆಸ್ಟ್ರೇಲಿಯಾದ ಟೆಸ್ಟ್‌ ತಂಡ ಹೀಗಿದೆ
  1. ಯಶಸ್ವಿ ಜೈಸ್ವಾಲ್‌ – ಭಾರತ

  2. ಬೆನ್‌ ಡಕೆಟ್‌ – ಇಂಗ್ಲೆಂಡ್‌

  3. ಜೋ ರೂಟ್‌ – ಇಂಗ್ಲೆಂಡ್‌

  4. ರಚಿನ್‌ ರವೀಂದ್ರ – ನ್ಯೂಜಿಲೆಂಡ್‌

  5. ಹ್ಯಾರಿ ಬ್ರೂಕ್‌ – ಇಂಗ್ಲೆಂಡ್‌

  6. ಕಮಿಂದು ಮೆಂಡಿಸ್‌ – ಶ್ರೀಲಂಕಾ

  7. ಅಲೆಕ್ಸ್‌ ಕಾರಿ (ವಿಕೆಟ್‌ ಕೀಪರ್‌) – ಆಸ್ಟ್ರೇಲಿಯಾ

  8. ಮ್ಯಾಟ್‌ ಹೆನ್ರಿ – ನ್ಯೂಜಿಲೆಂಡ್‌

  9. ಜಸ್‌ಪ್ರೀತ್ ಬೂಮ್ರಾ (ನಾಯಕ) – ಭಾರತ

  10. ಜೋಶ್‌ ಹ್ಯಾಷಲ್‌ವುಡ್‌ – ಆಸ್ಟ್ರೇಲಿಯಾ

  11. ಕೇಶವ್‌ ಮಹಾರಾಜ್‌ – ದಕ್ಷಿಣ ಆಫ್ರಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.