ಜೋ ರೂಟ್
– ರಾಯಿಟರ್ಸ್ ಚಿತ್ರ
ಮ್ಯಾಂಚೆಸ್ಟರ್: ಟೆಸ್ಟ್ ಕ್ರಿಕೆಟ್‌ಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿದರೆ ಅಚ್ಚರಿಯೇನಿಲ್ಲ ಎಂದು ಇಂಗ್ಲೆಂಡ್ ತಂಡದ ಉಪ ಕಪ್ತಾನ ಓಲಿ ಪೋಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಜೋ ರೂಟ್ ಶುಕ್ರವಾರ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 15,921 ರನ್ ಗಳಿಸಿದ್ದಾರೆ.
ಭಾರತದ ವಿರುದ್ಧ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ 150 ರನ್ ಬಾರಿಸುವ ಮೂಲಕ 34 ವರ್ಷದ ಜೋ ರೂಟ್ 13409 ರನ್ ಸೂರೆಗೈದಿದ್ದಾರೆ.
‘ಅವರು ಇಂಗ್ಲೆಂಡ್ ತಂಡಕ್ಕೆ ಆಡುವುದನ್ನು ಪ್ರೀತಿಸುತ್ತಾರೆ. ಟೆಸ್ಟ್ ಕ್ರಿಕೆಟ್ ಎಲ್ಲಕ್ಕಿಂತಲೂ ಮಿಗಿಲು. ಒಂದು ವೇಳೆ ಅವರ ದೇಹ ಸಹಕರಿಸಿದರೆ, ಖಂಡಿತಾ ಅವರು ಒಂದನೇ ಸ್ಥಾನ ಅಲಂಕರಿಸುತ್ತಾರೆ. ಅವರಿಗೆ ಸಾಧ್ಯವಿದ್ದಷ್ಟು ದೀರ್ಘವಾಗಿ ಅವರು ಆಟವಾಡಬೇಕು’ ಎಂದು ಪೋಪ್ ಹೇಳಿದ್ದಾರೆ.
‘ಟೆಸ್ಟ್ ಕ್ರಿಕೆಟ್ ಆಡುವ ಉತ್ಸಾಹ ಇನ್ನೂ ಅವರಿಗಿದೆ. ಅವರ ಮುಖದಲ್ಲಿ ಯಾವತ್ತೂ ನಗು ಇರುತ್ತದೆ. ಅವರಿಗೆ ರನ್ ಗಳಿಸುವ ಹಸಿವಿದೆ. ತೆಂಡೂಲ್ಕರ್ ದಾಖಲೆ ಮುರಿದರೆ ನನಗೆ ಆಶ್ಚರ್ಯವೇನಿಲ್ಲ’ ಎಂದು ಪೋಪ್ ಹೇಳಿದ್ದಾರೆ.
ಆಟಗಾರ | ತಂಡ | ರನ್ಗಳು |
---|---|---|
ಸಚಿನ್ ತೆಂಡೂಲ್ಕರ್ | ಭಾರತ | 15921 |
ಜೋ ರೂಟ್ | ಇಂಗ್ಲೆಂಡ್ | 13409 |
ರಿಕಿ ಪಾಂಟಿಂಗ್ | ಆಸ್ಟ್ರೇಲಿಯಾ | 13378 |
ಜ್ಯಾಕ್ ಕ್ಯಾಲಿಸ್ | ದಕ್ಷಿಣ ಆಫ್ರಿಕಾ | 13289 |
ರಾಹುಲ್ ದ್ರಾವಿಡ್ | ಭಾರತ | 13288 |
ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಪಾಂಟಿಂಗ್ ಅವರನ್ನು ಮೀರಿಸಿರುವ ಬಗ್ಗೆ ರೂಟ್ ಅವರಿಗೆ ತಿಳಿದಿದೆಯೇ? ಎನ್ನುವ ಪ್ರಶ್ನೆಗೆ ‘ಅವರು ದಾಖಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಅವರು ತಾಳ್ಮೆಯ ಪ್ರತಿರೂಪ. ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗುವುದು ಅದ್ಭುತ ಸಾಧನೆ. ಆ ಸಾಧನೆಯ ತೂಕದ ಬಗ್ಗೆ ಅವರಿಗೆ ತಿಳಿದಿದೆ. ಆದರೆ ಅಂತಹದ್ದನ್ನೆಲ್ಲಾ ತೋರ್ಪಡಿಸುವ ವ್ಯಕ್ತಿ ಅವರಲ್ಲ. ಈ ಪಂದ್ಯದಲ್ಲಿ ನಾವು ಗೆದ್ದರೆ ಅವರು ಇನ್ನಷ್ಟು ಖುಷಿ ಪಡುತ್ತಾರೆ’ ಎಂದು ಪೋಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.