
ಲಖನೌ: ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಣಜಿ ಟ್ರೋಫಿ ಜಯಿಸುವ ಕರ್ನಾಟಕದ ಪ್ರಯತ್ನ ಕೈಗೂಡಿಲ್ಲ. ಆದರೆ ಸತತ ಪ್ರಯತ್ನವನ್ನೂ ಬಿಟ್ಟಿಲ್ಲ. ಈ ವರ್ಷವೂ ದೇಶಿ ಕ್ರಿಕೆಟ್ ರಾಜನಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನೆರಡು ಮೆಟ್ಟಿಲುಗಳನ್ನು ಏರಿದರೆ ಪ್ರಶಸ್ತಿ ಜಯದ ಸಂಭ್ರಮ ಆಚರಿಸಬಹುದು.
ಅದರಲ್ಲಿ ಮೊದಲ ಮೆಟ್ಟಿಲಾಗಿರುವ ಸೆಮಿಫೈನಲ್ ಪಂದ್ಯವು ಭಾನುವಾರದಿಂದ ಆರಂಭವಾಗಲಿದೆ. ಏಕನಾ ಕ್ರೀಡಾಂಗಣದಲ್ಲಿ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವು ಉತ್ತರಾಖಂಡವನ್ನು ಎದುರಿಸಲಿದೆ.
42 ಸಲದ ಚಾಂಪಿಯನ್ ಮುಂಬೈ ತಂಡವನ್ನು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅದರ ನೆಲದಲ್ಲಿಯೇ ಮಣಿಸಿರುವ ಕರ್ನಾಟಕ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ.
ಈ ಟೂರ್ನಿಯಲ್ಲಿ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ (492 ರನ್), ಕರುಣ್ ನಾಯರ್ (631), ನಾಯಕ ದೇವದತ್ತ (300 ರನ್) ಹಾಗೂ ಆರ್. ಸ್ಮರಣ್ (688) ಅವರು ಉತ್ತಮ ಲಯದಲ್ಲಿದ್ದಾರೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ಗಳಿಸಿದ್ದ ಶತಕವು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಹತ್ತು ವರ್ಷಗಳ ಹಿಂದೆ ಕರ್ನಾಟಕವು ಸತತ ಎರಡು ಬಾರಿ ಪ್ರಶಸ್ತಿ ಗೆದ್ದ (2013–14 ಹಾಗೂ 2014–15) ಸಂದರ್ಭದಲ್ಲಿ ರಾಹುಲ್ ಅವರು 1871 ರನ್ ಕಲೆಹಾಕಿದ್ದರು. ಆದ್ದರಿಂದ ಅವರ ಮೇಲೆ ಈಗ ಎಲ್ಲರ ನಿಗಾ ಇದೆ.
ಬೌಲರ್‌ಗಳು ಈ ಟೂರ್ನಿಯಲ್ಲಿ ಪರಿಣಾಮಕಾರಿ ಆಟವಾಡಿದ್ಧಾರೆ. ಭಾರತ ತಂಡದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಇರುವುದು ತಂಡದ ಬಲ ಹೆಚ್ಚಿಸಿದೆ. ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 41 ವಿಕೆಟ್ ಗಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಕಾಣಿಕೆ ನೀಡಿದ್ದಾರೆ. ವೇಗಿಗಳಾದ ವಿದ್ವತ್ ಕಾವೇರಪ್ಪ (37 ವಿಕೆಟ್) ಹಾಗೂ ಸ್ಪಿನ್ನರ್ ಶಿಖರ್ ಶೆಟ್ಟಿ (33 ವಿಕೆಟ್) ಅವರು ಮಿಂಚಿದ್ದಾರೆ. ವಿದ್ಯಾಧರ್ ಪಾಟೀಲ ಕೂಡ ಉತ್ತಮ ಆಲ್‌ರೌಂಡರ್ ಆಗಿ ಆಡಿದ್ದಾರೆ. ಕಳೆದ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ಕುನಾಲ್ ಚಾಂಡೇಲಾ ನಾಯಕತ್ವದ ಉತ್ತರಾಖಂಡ ತಂಡವು ಎಂಟರ ಘಟ್ಟದಲ್ಲಿ ಜಾರ್ಖಂಡ್ ವಿರುದ್ಧ ಗೆದ್ದಿತ್ತು. ಈ ತಂಡದಲ್ಲಿ ಕನ್ನಡಿಗ ಜೆ. ಸುಚಿತ್ ಇದ್ದಾರೆ. ಅವರು ಈ ಋತುವಿನಲ್ಲಿ 25 ವಿಕೆಟ್ ಗಳಿಸಿದ್ದಾರೆ. ಅಲ್ಲದೇ 414 ರನ್ ಕೂಡ ಗಳಿಸಿದ್ದಾರೆ. ಕುನಾಲ್ (709 ರನ್) ಕೂಡ ಅಮೋಘ ಲಯದಲ್ಲಿದ್ದಾರೆ. ಸ್ಪಿನ್ನರ್ ಮಯಂಕ್ ಮಿಶ್ರಾ (52) ಅವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಭುಪೇನ್ ಲಾಲ್ವಾನಿ (409 ರನ್) ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದ್ದರಿಂದ ಉತ್ತರಾಖಂಡವು ಕರ್ನಾಟಕ ತಂಡಕ್ಕೆ ಕಠಿಣ ಪೈಪೋಟಿಯೊಡ್ಡುವ ಎಲ್ಲ ಸಾಧ್ಯತೆಗಳೂ ಇವೆ.
ಕಲ್ಯಾಣಿಯಲ್ಲಿ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಬಂಗಾಳ ಮತ್ತು ಜಮ್ಮು–ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.