ADVERTISEMENT

ವಿಜಯ್ ಹಜಾರೆ ಟ್ರೋಫಿ: ಸಮರ್ಥ್‌ ಭರ್ಜರಿ ಆಟ, ಮುಂಬೈ ವಿರುದ್ಧ ಕರ್ನಾಟಕ ಜಯಭೇರಿ

ಏಕದಿನ ಕ್ರಿಕೆಟ್ ಟೂರ್ನಿ: ಪ್ರವೀಣ್ ದುಬೆ, ಸಮರ್ಥ್‌ ಭರ್ಜರಿ ಆಟ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 13:26 IST
Last Updated 11 ಡಿಸೆಂಬರ್ 2021, 13:26 IST
ಆರ್‌.ಸಮರ್ಥ್ –ಟ್ವಿಟರ್ ಚಿತ್ರ
ಆರ್‌.ಸಮರ್ಥ್ –ಟ್ವಿಟರ್ ಚಿತ್ರ   

ಬೆಂಗಳೂರು: ಬೌಲಿಂಗ್‌ನಲ್ಲೂ ಬ್ಯಾಟಿಂಗ್‌ನಲ್ಲೂ ಪಾರಮ್ಯ ಮೆರೆದ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ವಿರುದ್ಧ ಅಮೋಘ ಜಯ ಸಾಧಿಸಿತು.

ತಿರುವನಂತಪುರದ ಮಂಗಳಾಪುರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಏಳು ವಿಕೆಟ್‌ಗಳಿಂದ ಬಲಿಷ್ಠ ಮುಂಬೈಯನ್ನು ಮಣಿಸಿತು. ಎದುರಾಳಿಗಳನ್ನು 208 ರನ್‌ಗಳಿಗೆ ನಿಯಂತ್ರಿಸಿದ ಕರ್ನಾಟಕ 45.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 211 ರನ್‌ ಗಳಿಸಿ ಗುರಿ ಮುಟ್ಟಿತು.

ರವಿಕುಮಾರ್ ಸಮರ್ಥ್ (96; 129 ಎ, 9 ಬೌಂ) ಮತ್ತು ರೋಹನ್ ಕದಂ (44; 79 ಎ, 4 ಬೌಂ) ಎಚ್ಚರಿಕೆಯ ಆಟವಾಡಿ 152 ಎಸೆತಗಳಲ್ಲಿ 95 ರನ್‌ ಕಲೆ ಹಾಕಿ ಭದ್ರ ತಳಪಾಯ ಒದಗಿಸಿದರು. ಕೆ. ಸಿದ್ಧಾರ್ಥ್ ಮತ್ತು ಮನೀಷ್ ಪಾಂಡೆ ಬೇಗನೇ ಔಟಾದಾಗ ಕೊಂಚ ಆತಂಕ ಮೂಡಿತು. ಆದರೆ ಸಮರ್ಥ್ ಜೊತೆಗೂಡಿದ ಕರುಣ್ ನಾಯರ್ ಮುರಿಯದ ನಾಲ್ಕನೇ ವಿಕೆಟ್‌ಗೆ 77 ರನ್ ಸೇರಿಸಿ ಸುಲಭ ಜಯ ಗಳಿಸಿಕೊಟ್ಟರು.

ADVERTISEMENT

ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆರಿಸಿಕೊಂಡಿತು. ಯಶಸ್ವಿ ಜೈಸ್ವಾಲ್ (61; 91 ಎಸೆತ, 5 ಬೌಂಡರಿ) ಮತ್ತು ಅರ್ಮಾನ್ ಜಾಫರ್ (43; 66 ಎ, 6 ಬೌಂ) ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು.ಮೊದಲ ವಿಕೆಟ್‌ಗೆ ಇವರಿಬ್ಬರು 135 ಎಸೆತಗಳಲ್ಲಿ 95 ರನ್ ಸೇರಿಸಿದರು. ಎಡಗೈ ಸ್ಪಿನ್ನರ್ ಸುಚಿತ್, ಜಾಫರ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ಕರ್ನಾಟಕ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ನಂತರ ಪ್ರವೀಣ್ ದುಬೆ ಭರ್ಜರಿ ದಾಳಿ ನಡೆಸಿದರು. ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಶಂಸ್ ಮುಲಾನಿ ಅವರ ವಿಕೆಟ್‌ಗಳನ್ನು ಕಬಳಿಸಿದ ಅವರು ಶಿವಂ ದುಬೆ ಮತ್ತು ಸಾಯಿರಾಜ್ ಪಾಟೀಲ್‌ ಅವರನ್ನೂ ಪಾಪಸ್ ಕಳುಹಿಸಿದರು. ಐದನೇ ಕ್ರಮಾಂಕದ ಹಾರ್ದಿಕ್ ತಮೋರೆ ಏಕಾಂಗಿ ಹೋರಾಟ ನಡೆಸಿ ಇನಿಂಗ್ಸ್ ಮುನ್ನಡೆಸಿದರು. ಒಟ್ಟು ಏಳು ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಟಲಾಗದೆ ಮರಳಿದರು. ತಮೋರೆ ಆಟದಿಂದಾಗಿ ತಂಡ 200ರ ಗಡಿ ದಾಟಿತು.

ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಭರ್ಜರಿ ಜಯ ಗಳಿಸಿದ ಕರ್ನಾಟಕ ನಂತರ ತಮಿಳುನಾಡು ವಿರುದ್ಧ ಸೋತಿತ್ತು. ಭಾನುವಾರ ಬರೋಡ್ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.