
ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್ ಭಾನುವಾರ ಅಭ್ಯಾಸ ನಡೆಸಿದರು
ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ಹನ್ನೊಂದು ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡ, ಮಂಗಳವಾರ ಆರಂಭವಾಗುವ ಫೈನಲ್‌ಗೆ ಪೂರ್ವಭಾವಿಯಾಗಿ ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಭಾನುವಾರ ಅಭ್ಯಾಸ ನಡೆಸಿತು.
ಭಾನುವಾರ ಬೆಳಿಗ್ಗೆ ನಗರಕ್ಕೆ ಬಂದ ತಂಡವನ್ನು ವಿಮಾನ ನಿಲ್ದಾಣದಲ್ಲಿ ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ, ಅಧ್ಯಕ್ಷ ಅಲ್ತಾಫ್ ಕಿತ್ತೂರು, ಕೆಎಸ್‌ಸಿಎ ವ್ಯವಸ್ಥಾಪನಕ ಸಮಿತಿ ಸದಸ್ಯ ಅವಿನಾಶ ವೈದ್ಯ ಬರಮಾಡಿಕೊಂಡರು.
ಮಧ್ಯಾಹ್ನ ಕ್ರೀಡಾಂಗಣಕ್ಕೆ ಬಂದ ಆಟಗಾರರು ಕೆಲಹೊತ್ತು ವಾರ್ಮ್‌ಅಪ್ ಮಾಡಿದರು. ನಂತರ ಫುಟ್‌ಬಾಲ್ ಆಡಿದರು. ಉತ್ತರಾಖಂಡ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ನಾಯಕ ದೇವದತ್ತ ಪಡಿಕ್ಕಲ್ ಅವರೂ ಅಭ್ಯಾಸದಲ್ಲಿ ಪಾಲ್ಗೊಂಡರು.
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ಆಟಗಾರರು ಭಾನುವಾರ ಅಭ್ಯಾಸದ ವೇಳೆ ಫುಟ್‌ಬಾಲ್ ಆಡಿದರು
ಮಯಂಕ್ ಅಗರವಾಲ್, ಸ್ಮರಣ್ ಆರ್., ಕರುಣ್ ನಾಯರ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅವರು ಸ್ಥಳೀಯ ಕ್ಲಬ್ ಬೌಲರ್‌ಗಳ ವೇಗದ ಎಸೆತಗಳನ್ನು ಹೆಚ್ಚು ಎದುರಿಸಿದರು. ಆರಂಭ ಆಟಗಾರ ಕೆ.ಎಲ್.ರಾಹುಲ್, ವೇಗಿ ಪ್ರಸಿದ್ಧ ಕೃಷ್ಣ ಅವರು ಅಭ್ಯಾಸಕ್ಕೆ ಬರಲಿಲ್ಲ.
ಜಮ್ಮು ಮತ್ತು ಕಾಶ್ಮೀರ ತಂಡದ ಆಟಗಾರರು ಭಾನುವಾರ ಬೆಳಿಗ್ಗೆ ಮೂರು ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬೆವರು ಹರಿಸಿದರು. ಸೋಮವಾರ ಬೆಳಿಗ್ಗೆಯೂ ಎರಡೂ ತಂಡಗಳು ಅಭ್ಯಾಸ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.