ADVERTISEMENT

ಭಾರತ ಎದುರು ನಮ್ಮದು ದುರ್ಬಲ ತಂಡವಾದರೂ, ಫಲಿತಾಂಶ ಏನಾದರೂ ಆಗಬಹುದು: ಪೊಲಾರ್ಡ್

ಏಜೆನ್ಸೀಸ್
Published 4 ಡಿಸೆಂಬರ್ 2019, 7:29 IST
Last Updated 4 ಡಿಸೆಂಬರ್ 2019, 7:29 IST
   

ನವದೆಹಲಿ: ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಡಿಸೆಂಬರ್‌ 6 ರಿಂದ 22ರವರೆಗೆ ತಲಾ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದ್ದು, ಭಾರತವೇ ಸರಣಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆದಾಗ್ಯೂ, ಫಲಿತಾಂಶ ಏನುಬೇಕಾದರೂ ಆಗಬಹುದು ಎಂದು ವೆಸ್ಟ್ ಇಂಡೀಸ್‌ ತಂಡದ ನಾಯಕ ಕೀರನ್‌ ಪೊಲಾರ್ಡ್ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಪ್ರಬಲ ಎದುರಾಳಿಯ ವಿರುದ್ಧ ಆಡಲು ಬಂದಿದ್ದೇವೆ. ದುರ್ಬಲರೆನಿಸಿಕೊಂಡಿದ್ದೇವೆ. ಅದು ಹಾಗಿರಲಿ. ಆದರೆ, ನೀವು ಇಲ್ಲಿ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಬೇಕಿದೆ. ಒಂದೇಒಂದು ಬಾರಿ ನೀವು ಅದನ್ನು ಮಾಡಿದರೆ ಏನು ಬೇಕಾದರು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲ ಅಫ್ಘಾನಿಸ್ತಾನ ಎದುರು ಆಡಿದ್ದ ವಿಂಡೀಸ್‌, ಮೂರು ಪಂದ್ಯಗಳ ಏಕದಿನಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿತ್ತು. ಆಬಗ್ಗೆ ಮಾತನಾಡಿರುವ ಪೊಲಾರ್ಡ್‌, ‘ಅಫ್ಘಾನಿಸ್ತಾನ ಸರಣಿ ಫಲಿತಾಂಶ ಅದ್ಭುತವಾದುದು. ಇದು ಮುಂದಿನ ಸರಣಿಗಳಿಗೆ ವಿಶ್ವಾಸ ಹೆಚ್ಚಿಸಲಿದೆ. ಅಫ್ಘಾನ್‌ ಸರಣಿಗೆ ಅತ್ಯಲ್ಪ ಅವಧಿಯಲ್ಲಿ ಸಿದ್ಧತೆ ನಡೆಸಿದಂತೆಯೇ ತಯಾರಿ ನಡೆಸಿಕೊಳ್ಳಲು ಆಟಗಾರರನ್ನು ಹುರಿದುಂಬಿಸಬೇಕಿದೆ’ ಎಂದಿದ್ದಾರೆ.

ADVERTISEMENT

ಟಿ20 ಪಂದ್ಯಗಳು ಡಿಸೆಂಬರ್‌ 06, 08 ಹಾಗೂ 11ರಂದು ಕ್ರಮವಾಗಿ ಹೈದರಾಬಾದ್‌, ತಿರುವನಂತಪುರಂ ಮತ್ತು ಮುಂಬೈನಲ್ಲಿ ನಡೆಯಲಿವೆ. ಏಕದಿನ ಪಂದ್ಯಗಳು ಚೆನ್ನೈ, ವಿಶಾಖಪಟ್ಟಣಂ ಹಾಗೂ ಕಟಕ್‌ನಲ್ಲಿ ಡಿಸೆಂಬರ್‌ 15, 18 ಹಾಗೂ 22ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.