ADVERTISEMENT

ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2025, 13:39 IST
Last Updated 18 ಅಕ್ಟೋಬರ್ 2025, 13:39 IST
<div class="paragraphs"><p>ಕಿರಣ್ ನವಗಿರೆ</p></div>

ಕಿರಣ್ ನವಗಿರೆ

   

ಕೃಪೆ: @UPWarriorz

ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿರಣ್ ನವಗಿರೆ, ಈ ಮಾದರಿಯ ಮಹಿಳಾ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್‌ ಎಂಬ ದಾಖಲೆ ಬರೆದಿದ್ದಾರೆ.

ADVERTISEMENT

ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ತಂಡದ ಪರ ಆಡುವ 26 ವರ್ಷದ ಕಿರಣ್‌, ಪಂಜಾಬ್‌ ಎದುರು ಕೇವಲ 34 ಎಸೆತಗಳಲ್ಲೇ ಮೂರಂಕಿ ಗಡಿ ದಾಟಿದರು.

ನಾಗ್ಪುರದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 110 ರನ್‌ ಗಳಿಸಿತ್ತು.

ಸುಲಭ ಗುರಿ ಎದುರು ಕಿರಣ್‌ ಅಕ್ಷರಶಃ ಅಬ್ಬರಿಸಿದರು. ಅವರ ಆಟದ ಬಲದಿಂದ ಮಹಾರಾಷ್ಟ್ರ ತಂಡ ಕೇವಲ 8 ಓವರ್‌ಗಳಲ್ಲೇ 1 ವಿಕೆಟ್‌ಗೆ 113 ರನ್‌ ಗಳಿಸಿ, ಜಯದ ನಗೆ ಬೀರಿತು. ಇದರಲ್ಲಿ ಕಿರಣ್‌ ಪಾಲು 106 ರನ್‌. ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಈಶ್ವರಿ ಸವ್ಕಾರ್‌ 1 ರನ್‌ ಗಳಿಸಿ ಔಟಾದರೆ, ಎಂ.ಆರ್‌. ಮಾರ್ಗಿ 6 ರನ್ ಗಳಿಸಿದರು.

ಒಟ್ಟು 35 ಎಸೆತಗಳನ್ನು ಎದುರಿಸಿದ ಕಿರಣ್‌ ಇನಿಂಗ್ಸ್‌ನಲ್ಲಿ 14 ಬೌಂಡರಿ, 7 ಸಿಕ್ಸ್ ಇದ್ದವು.

ಕಿರಣ್‌ ಅವರು ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (ಡಬ್ಲ್ಯುಪಿಎಲ್‌) ಯುಪಿ ವಾರಿಯರ್ಸ್‌ ತಂಡದ ಪರ ಆಡುತ್ತಿದ್ದಾರೆ.

ಹೊಸ ದಾಖಲೆ
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ದಾಖಲೆ ಇದುವರೆಗೆ ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ ಅವರ ಹೆಸರಲ್ಲಿತ್ತು.

2020–21ರ ನ್ಯೂಜಿಲೆಂಡ್‌ ಮಹಿಳಾ ಟಿ20 ಟೂರ್ನಿಯಲ್ಲಿ ವೆಲ್ಲಿಂಗ್ಟನ್‌ ತಂಡದ ಪರ ಆಡಿದ್ದ ಸೋಫಿ, ಒಟಾಗೊ ತಂಡದ ವಿರುದ್ಧ 36 ಎಸೆತಗಳಲ್ಲಿ ಮೂರಂಕಿ ದಾಟಿದ್ದರು. ಇದೀಗ ಆ ದಾಖಲೆಯನ್ನು ಕಿರಣ್‌ ಮುರಿದಿದ್ದಾರೆ.

ಒಟ್ಟಾರೆ, ಮಹಿಳೆಯ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ವೇಗವಾಗಿ ಶತಕ ಸಿಡಿಸಿದ ದಾಖಲೆ ಇರುವುದು ವೆಸ್ಟ್‌ ಇಂಡೀಸ್‌ನ ಡಿಯಾಂಡ್ರ ಡಾಟಿನ್‌ ಅವರ ಹೆಸರಿನಲ್ಲಿ. ಅವರು 2010ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 38 ಎಸೆತಗಳಲ್ಲಿ ನೂರು ರನ್‌ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.