ADVERTISEMENT

ಐಪಿಎಲ್‌: ಕೆಕೆಆರ್ ಆಟಗಾರರಿಗೆ ಮುಂಬೈಯಲ್ಲಿ ಕ್ವಾರಂಟೈನ್

ಏಕದಿನ ಸರಣಿಯಲ್ಲಿ ಆಡುತ್ತಿರುವವರಿಗೆ ‘ಬಬಲ್‌ನಿಂದ ಬಬಲ್‌ಗೆ’ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 16:10 IST
Last Updated 22 ಮಾರ್ಚ್ 2021, 16:10 IST
ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹೋಟೆಲ್‌ನಲ್ಲಿ ಆಟಗಾರನ ಜೊತೆ –ಟ್ವಿಟರ್ ಚಿತ್ರ
ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹೋಟೆಲ್‌ನಲ್ಲಿ ಆಟಗಾರನ ಜೊತೆ –ಟ್ವಿಟರ್ ಚಿತ್ರ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರು ಮುಂಬೈನಲ್ಲಿ ಜಮಾಯಿಸತೊಡಗಿದ್ದು ಒಂದು ವಾರದ ಕಡ್ಡಾಯ ಕ್ವಾರಂಟೈನ್‌ಗೆ ಸಜ್ಜಾಗುತ್ತಿದ್ದಾರೆ. ಈ ವಿಷಯವನ್ನು ತಂಡವು ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಐಪಿಎಲ್ ಟೂರ್ನಿಯ 14ನೇ ಆವೃತ್ತಿಗೆ ಮುಂದಿನ ತಿಂಗಳು ಒಂಬತ್ತರಂದು ಚಾಲನೆ ಸಿಗಲಿದೆ. ಕೋಲ್ಕತ್ತ ತಂಡದ ನಾಯಕ ದಿನೇಶ್ ಕಾರ್ತಿಕ್, ವರುಣ್ ಚಕ್ರವರ್ತಿ, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರಕೋಟಿ, ಸಂದೀಪ್ ವಾರಿಯರ್ ಮತ್ತು ವೈಭವ್ ಅರೋರ ಮೊದಲ ತಂಡದಲ್ಲಿ ಇಲ್ಲಿಗೆ ಬಂದಿದ್ದು ಸಹಾಯಕ ಕೋಚ್‌ ಅಭಿಷೇಕ್ ನಾಯರ್ ಮತ್ತು ಸಹಾಯಕ ಬೌಲಿಂಗ್ ಕೋಚ್ ಓಂಕಾರ್ ಸಾಳ್ವಿ ಕೂಡ ತಂಡದೊಂದಿಗೆ ಇದ್ದಾರೆ.

ವೆಸ್ಟ್ ಇಂಡೀಸ್‌ನ ಸುನಿಲ್ ನಾರಾಯಣ್ ಮತ್ತು ಆ್ಯಂಡ್ರೆ ರಸೆಲ್ ಸದ್ಯದಲ್ಲೇ ತಂಡವನ್ನು ಸೇರಲಿದ್ದು ಉಳಿದ ಆಟಗಾರರ ಬರುವಿಕೆಯ ಬಗ್ಗೆ ಮಾಹಿತಿ ಲಭ್ಯವಿಲ್ಲ. ಮಾಸ್ಕ್ ಧಿರಿಸಿ ವಿಮಾನದಲ್ಲಿ ಕುಳಿತಿರುವ ರಸೆಲ್ ಚಿತ್ರವನ್ನು ಪೋಸ್ಟ್ ಮಾಡಿರುವ ತಂಡ ’ವಿಮಾನದಲ್ಲಿ ಯಾರಿದ್ದಾರೆ ನೋಡಿ. ಈ ದೈತ್ಯ ಆಟಗಾರನಿಗಾಗಿ ಕಾಯುತ್ತಿದ್ದೇವೆ’ ಎಂದು ಬರೆದಿದೆ. ‘ಕೆರಿಬಿಯನ್ ಆಟಗಾರರು ಕೆಲವೇ ತಾಸುಗಳಲ್ಲಿ ಅವರ ಮತ್ತೊಂದು ತವರು, ಭಾರತದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ADVERTISEMENT

ಬಿಸಿಸಿಐ ಮಾರ್ಗಸೂಚಿ ಪ್ರಕಾರ ಆಟಗಾರರು, ನೆರವು ಸಿಬ್ಬಂದಿ ಮತ್ತು ತಂಡದ ಆಡಳಿತದವರು ಬಯೋಬಬಲ್‌ ಪ್ರವೇಶಿಸುವುದಕ್ಕಿಂತ ಏಳುದಿನ ಮೊದಲು ಹೋಟೆಲ್‌ ಕೊಠಡಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕು.

‘ಕ್ವಾರಂಟೈನ್ ಅವಧಿಯಲ್ಲಿ ಪ್ರತಿಯೊಬ್ಬರನ್ನೂ ಅನೇಕ ಬಾರಿ ಪರೀಕ್ಷೆಗೆ ಒಳಪಡಿಸಲಾಗುವುದು. ನೆಗೆಟಿವ್ ವರದಿ ಬಂದರೆ ಮಾತ್ರ ಕೊಠಡಿಯಿಂದ ಹೊರಬರಲು ಮತ್ತು ಅಭ್ಯಾಸ ಮಾಡಲು ಅನುಮತಿ ನೀಡಲಾಗುವುದು’ ಎಂದು ಕೆಕೆಆರ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಆಡುತ್ತಿರುವ ಕೆಕೆಆರ್ ಆಟಗಾರರಾದ ಏಯಾನ್ ಮಾರ್ಗನ್ , ಶುಭಮನ್ ಗಿಲ್‌, ಕುಲದೀಪ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ ಸರಣಿ ಮುಗಿದ ನಂತರ ಮುಂಬೈಗೆ ಬರಲಿದ್ದಾರೆ. ಅವರು ‘ಬಬಲ್‌ನಿಂದ ಬಬಲ್‌ಗೆ’ ಸೌಲಭ್ಯದಡಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ತಂಡ ಕಳೆದ ಬಾರಿಯ ಆವೃತ್ತಿಯಲ್ಲಿ ಐದನೇ ಸ್ಥಾನ ಗಳಿಸಿತ್ತು. ತಲಾ ಏಳು ಜಯ ಮತ್ತು ಸೋಲು ಕಂಡಿದ್ದ ತಂಡ ಈ ಬಾರಿ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೆಣಸಲಿದೆ. ಏಪ್ರಿಲ್ 11ರಂದು ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.