ಕೆಎಲ್ ರಾಹುಲ್
ಚಿತ್ರ: @BEASTKLR
ರಾಜಕೋಟ್: ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟದಲ್ಲಿದ್ದಾಗ, ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಅವರು ಅಜೇಯ 114 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಕಡಿಮೆ ಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು.
ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆ.ಎಲ್ ರಾಹುಲ್ ಅವರು 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 92 ಎಸೆತಗಳಲ್ಲಿ 112 ರನ್ ಕಲೆಹಾಕಿದರು. ಶತಕ ಸಿಡಿಸಿದ ಸಂದರ್ಭದಲ್ಲಿ ಅವರು, ಬಾಯಲ್ಲಿ ಕೈಯಿಟ್ಟು ವಿಶೇಷವಾಗಿ ಸಂಭ್ರಮಿಸಿದರು.
ಅವರ ಈ ವಿಶೇಷ ಸಂಭ್ರಮಾಚರಣೆಯ ಹಿಂದಿನ ಅರ್ಥವೇನು ಎಂಬುದನ್ನು ಅಭಿಮಾನಿಗಳು ಹುಡುಕುತ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 118 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆ ಸಂದರ್ಭದಲ್ಲಿ, ರವೀಂದ್ರ ಜಡೇಜ ಜೊತೆ 73 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ನಿತೀಶ್ ಕುಮಾರ್ ರೆಡ್ಡಿ ಔಟ್ ಆದ ಬಳಿಕವೂ ಬಾಲಂಗೋಚಿಗಳ ಜೊತೆ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಅವರು, 48ನೇ ಓವರ್‌ನ ಕೊನೆ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರ್ಣಗೊಳಸಿದರು. ಈ ವೇಳೆ, ಅವರು ತಮ್ಮ ಮಗಳಿಗಾಗಿ ವಿಭಿನ್ನವಾಗಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆ ಅವರ ಅಭಿಮಾನಿಗಳನ್ನು ರಂಜಿಸಿದೆ.
ಮೊದಲು ಹೆಲ್ಮೆಟ್ ತೆಗೆದು ನೆಲಕ್ಕಿಟ್ಟು, ಎಡಗೈ ಗ್ಲೌಸ್ ತೆಗೆದು ಬ್ಯಾಟ್ ಮೇಲಕ್ಕೆತ್ತಿ ಎಡಗೈನ ಎರಡು ಬೆರಳುಗಳನ್ನು ಬಾಯಲ್ಲಿಟ್ಟು ಶತಕವನ್ನು ಮಗಳಿಗೆ ಅರ್ಪಿಸಿದವರಂತೆ ಸಂಭ್ರಮಿಸಿದರು.
ರಾಹುಲ್ ಈ ರೀತಿಯ ಸಂಭ್ರಮಾಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಅವರು ಇದೇ ರೀತಿ ಸಂಭ್ರಮಿಸಿದ್ದರು. ಆಗ ತಮ್ಮ ಮಗಳಿಗಾಗಿ ಈ ರೀತಿ ಸಂಭ್ರಮಿಸಿರುವುದಾಗಿ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.