ಪ್ರಸಿದ್ಧ ಕೃಷ್ಣ, ರಾಣಾ ಜೊತೆ ರಾಹುಲ್
ಚಿತ್ರ: @03___TV
ರಾಯಪುರ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿದ್ದರೂ ಬೌಲರ್‌ಗಳ ನೀರಸ ಪ್ರದರ್ಶನದಿಂದಾಗಿ ಸೋಲು ಅನುಭವಿಸಿದೆ. ಈ ನಡುವೆ ತಂಡದ ನಾಯಕರಾಗಿರುವ ಕೆ.ಎಲ್. ರಾಹುಲ್ ಅವರು ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ ಮೈದಾನದಲ್ಲಿ ಕನ್ನಡದಲ್ಲಿ ಸಲಹೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಮಾತ್ರವಲ್ಲ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆಲ್ಲಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ರಾಯಪುರ ಮೈದಾನದಲ್ಲಿ ಕನ್ನಡದ ಚರ್ಚೆ ಕೇಳಿ ಕನ್ನಡಿಗರು ಸಿಕ್ಕಾಪಟ್ಟೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮೈದಾನದಲ್ಲಿ ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ’ಪ್ರಸಿದ್ಧ್ ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು. ಹೇಳಿದ್ದೀನಿ ಏನು ಹಾಕಬೇಕು ಅಂತ, ಅದನ್ನೇ ಹಾಕು’ ಎಂದಿದ್ದಾರೆ.
ಅದಕ್ಕೆ ಉತ್ತರಿಸಿದ ಪ್ರಸಿದ್ಧ್ ‘ತಲೆಗೆ ಹಾಕ್ಲಾ’ ಎಂದು ಪ್ರಶ್ನಿಸುತ್ತಾರೆ. ಬಳಿಕ ಉತ್ತರಿಸಿದ ರಾಹುಲ್, ತಲೆಗೆಲ್ಲಾ ಬೇಡ ಈಗ, ನಾನು ಏನು ಹೇಳಿದ್ದೀನಿ ಅದನ್ನೇ ಹಾಕು’ ಎಂದು ಉತ್ತರಿಸುತ್ತಾರೆ. ಮತ್ತೆ ತಲೆ ಮೇಲೆ ಬಾಲ್ ಹಾಕಿದ್ದಕ್ಕೆ ಗರಂ ಆದ ರಾಹುಲ್, ‘ಹೇಳಿ ಬಂದಿದ್ದೀನಿ ತಲೇಗೆ ಹಾಕಬೇಡ ಅಂತ, ಮತ್ತೆ ಅದೇ ಮಾಡ್ತೀಯಾ’ ಎಂದಿದ್ದಾರೆ. ಸದ್ಯ, ಈ ಇಬ್ಬರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಮತ್ತು ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.