ADVERTISEMENT

IPL 2021: ಮೊಣಕಾಲಿನ ಗಾಯ, ಐಪಿಎಲ್‌ನಿಂದ ಟಿ. ನಟರಾಜನ್ ಹೊರಕ್ಕೆ

ಪಿಟಿಐ
Published 23 ಏಪ್ರಿಲ್ 2021, 1:39 IST
Last Updated 23 ಏಪ್ರಿಲ್ 2021, 1:39 IST
ಟಿ. ನಟರಾಜನ್ - ಪಿಟಿಐ ಚಿತ್ರ
ಟಿ. ನಟರಾಜನ್ - ಪಿಟಿಐ ಚಿತ್ರ   

ಚೆನ್ನೈ: ವೇಗದ ಬೌಲರ್ ಟಿ.ನಟರಾಜನ್ ಅವರು ಮೊಣಕಾಲಿನ ಗಾಯದಿಂದಾಗಿ ಐಪಿಎಲ್‌ ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ರಮುಖ ವೇಗದ ಬೌಲರ್ ಒಬ್ಬರ ಕೊರತೆ ಕಾಡಲಿದೆ.

ಪ್ರಸಕ್ತ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ಪಂದ್ಯಗಳನ್ನಾಡಿದ್ದು, ಈ ಪೈಕಿ ಎರಡರಲ್ಲಿ ಮಾತ್ರವೇ ನಟರಾಜನ್ ಆಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯ ಸಂದರ್ಭ ಅವರ ಮೊಣಕಾಲಿಗೆ ಗಾಯವಾಗಿತ್ತು. ಅದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂಬುದು ಈಗ ಬೆಳಕಿಗೆ ಬಂದಿದೆ.

‘ನಟರಾಜನ್ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಅವರು ಎನ್‌ಸಿಎಯಲ್ಲಿ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು. ಅಲ್ಲಿ ಅವರನ್ನು ‘ಫಿಟ್’ ಎಂದು ಘೋಷಿಸಲಾಗಿತ್ತು. ಬಳಿಕ ಅವರನ್ನು ಇಂಗ್ಲೆಂಡ್ ವಿರುದ್ಧದದ ಟಿ20 ಮತ್ತು ಒಂದು ಏಕದಿನ ಪಂದ್ಯದಲ್ಲಿ ಆಡಿಸಲಾಗಿತ್ತು. ಆದರೆ ಅವರು ಶೇ 100ರಷ್ಟು ‘ಫಿಟ್’ ಆಗಿರಲಿಲ್ಲ ಎಂಬುದು ಗೊತ್ತಾಗಿದೆ. ಇನ್ನು ಅವರು ದೀರ್ಘ ಅವಧಿಗೆ ಅಲಭ್ಯರಾಗಬಹುದು’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ಹೇಳಿವೆ.

ಐಪಿಎಲ್‌ನಲ್ಲಿ ಮತ್ತು ಟೀಮ್‌ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ನಟರಾಜನ್ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.