ADVERTISEMENT

ವಿರಾಟ್‌ ಕೊಹ್ಲಿಗೆ ಬೌಲಿಂಗ್ ಮಾಡುವುದು ತುಸು ಕಠಿಣ: ಜೇಮ್ಸ್‌ ಆ್ಯಂಡರ್ಸನ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:42 IST
Last Updated 16 ಜೂನ್ 2025, 15:42 IST
ಜೇಮ್ಸ್ ಆ್ಯಂಡರ್ಸನ್
ಜೇಮ್ಸ್ ಆ್ಯಂಡರ್ಸನ್   

ಲಂಡನ್‌: ಇಂಗ್ಲೆಂಡ್‌ನ ಮಾಜಿ ವೇಗದ ಬೌಲಿಂಗ್ ದಿಗ್ಗಜ ಜೇಮ್ಸ್‌ ಆ್ಯಂಡರ್ಸನ್ ತಮ್ಮ 21 ವರ್ಷಗಳ ದೀರ್ಘ ಕ್ರಿಕೆಟ್‌ ಜೀವನದಲ್ಲಿ ಭಾರತದ ಬ್ಯಾಟಿಂಗ್ ತಾರೆಯರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ಹಲವು ಬಾರಿ ಮುಖಾಮುಖಿ ಆಗಿದ್ದಾರೆ. ಆದರೆ ಈ ಇಬ್ಬರಲ್ಲಿ ವಿರಾಟ್‌ ಅವರಿಗೆ ಬೌಲಿಂಗ್ ಮಾಡುವುದು ಅವರಿಗೆ ತುಸು ಕಠಿಣವೆನಿಸಿದೆ.

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಕಳೆದ ವರ್ಷವಷ್ಟೇ ವಿದಾಯ ಹೇಳಿದ್ದರು. ಲ್ಯಾಂಕಾಶೈರ್‌ನ ಈ ದಿಗ್ಗಜ ಬೌಲರ್‌ ಭಾರತದ ಇಬ್ಬರು ತಾರಾ ಬ್ಯಾಟರ್‌ಗಳ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ತೆಂಡೂಲ್ಕರ್ ಅವರ ವಿಕೆಟ್‌ಅನ್ನು 9 ಸಲ ಮತ್ತು ಕೊಹ್ಲಿ ಅವರ ವಿಕೆಟ್‌ಅನ್ನು ಏಳು ಸಲ ಪಡೆದಿದ್ದಾರೆ.

‘ಕೊಹ್ಲಿ ಮೊದಲ ಬಾರಿ (2014ರಲ್ಲಿ) ಇಂಗ್ಲೆಂಡ್‌ಗೆ ಬಂದಿದ್ದಾಗ ನಾನು ಅವರ ವಿಕೆಟ್‌ಅನ್ನು ಬೇಗ ಪಡೆಯುತ್ತಿದ್ದೆ. ಆಫ್‌ಸ್ಟಂಪ್‌ ಆಚೆ ಹೋಗುವ ಎಸೆತಗಳ ಎದುರು ಅವರ ದೌರ್ಬಲ್ಯ ಬಂಡವಾಳ ಮಾಡಿಕೊಳ್ಳುತ್ತಿದ್ದೆ. ಆದರೆ ನಂತರದ ಪ್ರವಾಸದಲ್ಲಿ (2018) ಕೊಹ್ಲಿ ತಿದ್ದಿಕೊಂಡಿದ್ದು ಅವರಲ್ಲಿ ಆ ದೌರ್ಬಲ್ಯ ಕಾಣಲಿಲ್ಲ. ಅವರು ಬೇರೆಯೇ ಆಟಗಾರನಂತೆ ಕಂಡಿದ್ದರು’ ಎಂದು ಈಗಲೂ ಕೌಂಟಿ ಕ್ರಿಕೆಟ್‌ ಆಡುತ್ತಿರುವ 42 ವರ್ಷ ವಯಸ್ಸಿನ ಆ್ಯಂಡರ್ಸನ್‌ ‘ಟಾಕ್‌ಸ್ಪೋರ್ಟ್‌’ಗೆ ತಿಳಿಸಿದ್ದಾರೆ.

ADVERTISEMENT

‘ಕೊಹ್ಲಿ ಈ ಆಟವನ್ನು ಹೊಸ ಎತ್ತರಕ್ಕೆ ಒಯ್ದರು. ನನಗಷ್ಟೇ ಅಲ್ಲ, ಬೌಲರ್‌ಗಳಿಗೆ ತುಂಬಾ ಕಷ್ಟ ಎದುರಿಸುವಂತೆ ಮಾಡಿದರು. ಮೊದಲ ಬಾರಿಯ ಸರಣಿಯಲ್ಲಿ ಅವರನ್ನು 4–5 ಸಲ ಔಟ್‌ ಮಾಡಿದ್ದೆ. ಆದರೆ ನಂತರದ ಸರಣಿಯಲ್ಲಿ ಅವರನ್ನು ಎದುರಿಸಿದಾಗ ವಿಕೆಟ್‌ ಪಡೆಯಲಾಗಲಿಲ್ಲ’ 

‘ಸಚಿನ್‌ಗೆ ಬೌಲಿಂಗ್ ಮಾಡುತ್ತಿದ್ದಾಗ ಕೊಹ್ಲಿ ಹೊಂದಿದ್ದ ಪ್ರಭುತ್ವ ನನಗೆ ಕಂಡಿರಲಿಲ್ಲ. ಅವರಿಗೆ (ಕೊಹ್ಲಿ) ಬೌಲಿಂಗ್ ಮಾಡುವುದು ಕಷ್ಟವಾಗಿತ್ತು. ಅಂಥ ಗಟ್ಟಿ ಮನೋಬಲ ಹೊಂದಿದ್ದರು. ಕೊಹ್ಲಿ ರಣಾಂಗಣಕ್ಕೆ ಇಳಿದು ಪ್ರಾಬಲ್ಯ ಸಾಧಿಸಲು ಸಜ್ಜಾಗಿಯೇ ಬರುತ್ತಿದ್ದರು. ಬೌಲರ್‌ಗಳು ಅದನ್ನು ತಿಳಿದುಕೊಳ್ಳಬೇಕೆಂದು ಬಯಸುವ ರೀತಿ ಅವರ ಆಟವಿತ್ತು. ಆರಂಭಿಕ ಯಶಸ್ಸಿನ ನಂತರ ಅವರಿಗೆ ಬೌಲಿಂಗ್ ಮಾಡುವುದು ಕಷ್ಟವಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.