ADVERTISEMENT

ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಗೆ ಬಡ್ತಿ

ಪಿಟಿಐ
Published 5 ಮಾರ್ಚ್ 2025, 15:24 IST
Last Updated 5 ಮಾರ್ಚ್ 2025, 15:24 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ದುಬೈ: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 84 ರನ್‌ ಗಳಿಸಿದ ಭಾರತದ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಏಕದಿನ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಬುಧವಾರ ಪ್ರಕಟವಾದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಭಾರತ ತಂಡದ ಉಪನಾಯಕ, ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 36 ವರ್ಷ ವಯಸ್ಸಿನ ಕೊಹ್ಲಿ ಕಳೆದ ವಾರ ಪ್ರಕಟವಾದ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು.

ಆದರೆ, ನಾಯಕ ರೋಹಿತ್‌ ಶರ್ಮಾ ಎರಡು ಸ್ಥಾನಗಳ ಇಳಿಕೆ ಕಂಡು ಐದನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಆಜಂ ಮತ್ತು ದಕ್ಷಿಣ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ADVERTISEMENT

ಭಾರತದ ಅಕ್ಷರ್ ಪಟೇಲ್‌ ಅವರು ಆಲ್‌ರೌಂಡರ್‌ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 13ನೇ ಸ್ಥಾನಕ್ಕೆ ಏರಿದ್ದಾರೆ. ಅಫ್ಘಾನಿಸ್ತಾನದ ಅಜ್ಮತ್‌ ಉಲ್ಲಾ ಒಮರ್‌ಝೈ ಅವರು ಸ್ವದೇಶದ ಮೊಹಮ್ಮದ್ ನಬಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಏರಿದರು.

ಅನುಭವಿ ವೇಗಿ ಮೊಹಮ್ಮದ್‌ ಶಮಿ ಅವರು ಮೂರು ಸ್ಥಾನಗಳ ಬಡ್ತಿಯೊಂದಿಗೆ 11ನೇ ಸ್ಥಾನಕ್ಕೇರಿದ್ದಾರೆ. ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಈತನಕ ಎಂಟು ವಿಕೆಟ್‌ ಪಡೆದಿದ್ದಾರೆ. ಶ್ರೀಲಂಕಾದ ಮಹೀಷ ತೀಕ್ಷಣ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.