ADVERTISEMENT

Kohli Retirement: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್‌ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2025, 6:35 IST
Last Updated 12 ಮೇ 2025, 6:35 IST
   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು, ಸೋಮವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್‌ ಮಾಡಿದ್ದಾರೆ. 'ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ನೀಲಿ ಜರ್ಸಿ ಧರಿಸಿ 14 ವರ್ಷಗಳಾಗಿವೆ. ನಿಜವಾಗಿಯೂ, ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುವುದನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಹಾಗೂ ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂಹ ಪಾಠಗಳನ್ನು ಕಲಿಸಿದೆ. ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಏನೋ ಆತ್ಮೀಯವಾದದ್ದು ಇದೆ. ಸದ್ದಿಲ್ಲದ ಕಠಿಣ ಪರಿಶ್ರಮ, ದೀರ್ಘ ದಿನಗಳು, ಯಾರಿಗೂ ಕಾಣದ ಆದರೆ ಶಾಶ್ವತವಾಗಿ ನಿಮ್ಮೊಂದಿಗಿರುವ ಸಣ್ಣ ಕ್ಷಣಗಳು ಸೇರಿವೆ' ಎಂದು ಬರೆದುಕೊಂಡಿದ್ದಾರೆ.

'ಇದು (ನಿವೃತ್ತಿ) ಸುಲಭವಲ್ಲ ಎಂದು ಗೊತ್ತಿದೆ. ಆದರೂ ಕೂಡ ಇದು ಸರಿಯೆಂದು ನನಗೆ ಅನಿಸುತ್ತಿದೆ. ಇದು ನಾನು ಆಶಿಸಿದ್ದಕ್ಕಿಂತ ಹೆಚ್ಚಿನದನ್ನು ನೀಡಿದೆ. ನನ್ನನ್ನು ಪ್ರೀತಿಸಿದ ಪ್ರತಿಯೊಬ್ಬ ವ್ಯಕ್ತಿಗಾಗಿ ಕೃತಜ್ಞತೆಯಿಂದ ತುಂಬಿದ ಹೃದಯದೊಂದಿಗೆ ಹೊರನಡೆಯುತ್ತಿದ್ದೇನೆ. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಖುಷಿಯೊಂದಿಗೆ ಸ್ಮರಿಸಿಕೊಳ್ಳುತ್ತೇನೆ‘ ಎಂದೂ ಅವರು ಹೇಳಿದ್ದಾರೆ.

ADVERTISEMENT

2011ರಲ್ಲಿ (ವೆಸ್ಟ್‌ ಇಂಡೀಸ್‌ ವಿರುದ್ಧ) ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಈವರೆಗೆ 123 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 46.85 ಸರಾಸರಿಯಲ್ಲಿ 30 ಶತಕಗಳೊಂದಿಗೆ 9230 ರನ್ ಗಳಿಸಿದ್ದಾರೆ. ಕಳೆದ ವರ್ಷ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ಅವರು ಈಗ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.