ಅಹಮದಾಬಾದ್: ಇಂಗ್ಲೆಂಡ್ ತಂಡದ ವಿರುದ್ಧ ಬುಧವಾರ ಇಲ್ಲಿ ನಡೆಯಲಿರುವ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಲಯಕ್ಕೆ ಮರಳುವರೇ ಎಂಬ ಕುತೂಹಲ ಈಗ ಮೂಡಿದೆ.
ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿರುವ ಭಾರತ ತಂಡವು ಕ್ಲೀನ್‌ಸ್ವೀಪ್ ಫಲಿತಾಂಶ ಸಾಧಿಸುವ ಛಲದಲ್ಲಿದೆ. ಇದೇ ಹೊತ್ತಿನಲ್ಲಿ ವಿರಾಟ್ ಫಾರ್ಮ್‌ಗೆ ಮರಳಿದರೆ, ಚಾಂಪಿಯನ್ಸ್ ಟ್ರೋಫಿ ಆಡಲಿರುವ ತಂಡದ ಆತ್ಮವಿಶ್ವಾಸ ನೂರ್ಮಡಿಯಾಗುವುದು ಖಚಿತ. ಎರಡನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (119; 90ಎಸೆತ) ಅಬ್ಬರದ ಶತಕ ಹೊಡೆದರು. ಅವರು ಕೂಡ ಕಳೆದ ಹಲವು ಪಂದ್ಯಗಳಿಂದ ಲಯ ಕಂಡುಕೊಳ್ಳಲು ಪರದಾಡುತ್ತಿದ್ದರು. ಕಟಕ್‌ನಲ್ಲಿ ಚೆಂದದ ಬ್ಯಾಟಿಂಗ್ ಮೂಲಕ ತಾವಿನ್ನೂ ಸೋತಿಲ್ಲ ಎಂಬ ಸಂದೇಶ ರವಾನಿಸಿದರು.
ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಮಂಡಿನೋವಿನಿಂದಾಗಿ ಆಡಿರಲಿಲ್ಲ. ಎರಡನೇ ಪಂದ್ಯದಲ್ಲಿ ಕಣಕ್ಕಿಳಿದರು. ಆದರೆ 5 ರನ್ ಗಳಿಸಿ ಔಟಾದರು. ಒಂದೊಮ್ಮೆ ಈ ಪಂದ್ಯದಲ್ಲಿ ವಿರಾಟ್ 89 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೇರಿಸಿದ ಬ್ಯಾಟರ್‌ಗಳ ಕ್ಲಬ್ ಸೇರಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ನಂತರ ಈ ಸಾಧನೆ ಮಾಡುವ ಅವಕಾಶ ಕೊಹ್ಲಿಗೆ ಇದೆ. ರೋಹಿತ್, 13 ರನ್ ಗಳಿಸಿದರೆ 11000 ರನ್‌ಗಳ ಮೈಲುಗಲ್ಲು ಮುಟ್ಟಲಿದ್ದಾರೆ.
ವರುಣ್ ಚಕ್ರವರ್ತಿ ಅವರನ್ನು ಸೇರ್ಪಡೆ ಮಾಡಿರುವುದರಿಂದ ಸ್ಪಿನ್ ವಿಭಾಗವು ಉತ್ತಮಗೊಂಡಿದೆ. ಗಾಯದಿಂದಾಗಿ ದೀರ್ಘ ಸಮಯ ಆಟದಿಂದ ದೂರವಿದ್ದ ಮೊಹಮ್ಮ್ ಶಮಿ ತಂಡಕ್ಕೆ ಮರಳಿದ್ದು, ಲಯ ಕಂಡುಕೊಳ್ಳುತ್ತಿರುವುದು ಆತಿಥೇಯ ಬಳಗದಲ್ಲಿ ಸಮಾಧಾನ ಮೂಡಿಸಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಗೈರುಹಾಜರಿಯಲ್ಲಿ ಶಮಿ ಜವಾಬ್ದಾರಿ ಹೆಚ್ಚಿದೆ.
ಕಳೆದ ಪಂದ್ಯದಲ್ಲಿ ಇದ್ದ ಹನ್ನೊಂದರ ಬಳಗವನ್ನೇ ಮತ್ತೆ ಕಣಕ್ಕಿಳಿಸುವ ಎಲ್ಲ ಸಾಧ್ಯತೆಗಳೂ ಇವೆ. ಆದ್ದರಿಂದ ಯಶಸ್ವಿ ಜೈಸ್ವಾಲ್ ವಿಶ್ರಾಂತಿ ಪಡೆಯುವುದು ಖಚಿತ. ಅಲ್ಲದೇ ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್ ಪಾತ್ರದಲ್ಲಿ ಮುಂದುವರಿಯುವುದರಿಂದ ರಿಷಭ್ ಪಂತ್ ಕೂಡ ಬೆಂಚ್‌ನಲ್ಲಿರುವ ಸಾಧ್ಯತೆ ಹೆಚ್ಚು.
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆದಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೇ ಭಾರತ–ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಇಲ್ಲಿಯ ಪಿಚ್ ಸ್ಪಿನ್‌ಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆಗಳು ಇವೆ.
ಇಂಗ್ಲೆಂಡ್ ತಂಡವು ಸಮಾಧಾನಕರವಾದ ಗೆಲುವಿನೊಂದಿಗೆ ಮರಳುವ ಹಂಬಲದಲ್ಲಿದೆ. ಟಿ20 ಸರಣಿಯಲ್ಲಿಯೂ ಸೋತಿದ್ದ, ಪ್ರವಾಸಿ ಬಳಗಕ್ಕೆ ಏಕದಿನ ಸರಣಿ ಕೂಡ ಕೈಜಾರಿದೆ. ಆದರೆ ಪ್ರವಾಸದ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಮರಳುವತ್ತ ಜೋಸ್ ಬಟ್ಲರ್ ಬಳಗ ಚಿತ್ತ ನೆಟ್ಟಿದೆ. ಬೆನ್ ಡಕೆಟ್, ಜೋ ರೂಟ್, ಬಟ್ಲರ್ ಮತ್ತು ಬ್ಯಾಟರ್‌ಗಳು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಸಮರ್ಥರಾಗಿದ್ದಾರೆ. ಆದರೆ ಬೌಲಿಂಗ್ ಪಡೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ಸವಾಲು ಇದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.