ನವದೆಹಲಿ: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಕೊಟ್ಟ ಭಾರತ ತಂಡದ ನಾಯಕ ಶುಭಮನ್ ಗಿಲ್ ನಿರ್ಧಾರವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದಾರೆ.
ಹೆಡಿಂಗ್ಲೆಯಲ್ಲಿ ಮಂಗಳವಾರ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ಎದುರು 5 ವಿಕೆಟ್‌ಗಳಿಂದ ಸೋತಿತ್ತು. ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಗೌತಮ್ ಮಾತನಾಡಿದರು.
‘ಕೆಲವು ಬಾರಿ ನಾಯಕತ್ವ ವಹಿಸಿದವರಿಗೆ ತತ್‌ಕ್ಷಣದಲ್ಲಿ ಅನಿಸಿದ್ದನ್ನು ಮಾಡುತ್ತಾರೆ. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜ ರನ್‌ಗಳನ್ನು ನಿಯಂತ್ರಿಸಿದ್ದರು. ಅದರಿಂದಾಗಿ ಇನ್ನೊಂದು ಬದಿಯಿಂದ ಮೂವರು ವೇಗಿಗಳನ್ನು ಪ್ರಯೋಗಿಸಲು ಅನುಕೂಲವಾಯಿತು. ಶಾರ್ದೂಲ್ ಸಾಮರ್ಥ್ಯ ನಮಗೆಲ್ಲ ತಿಳಿದಿದೆ. ಅವರು ನಾಲ್ಕನೇ ವೇಗಿ ಆದ ಮಾತ್ರಕ್ಕೆ ಸ್ಪಿನ್ನರ್ ಸ್ಥಾನದಲ್ಲಿ ಅವರನ್ನು ಬೌಲಿಂಗ್‌ಗೆ ಇಳಿಸಬೇಕೆಂದೇನೂ ಇಲ್ಲ. ಆಟ ಸಾಗಿದ್ದ ಪರಿಸ್ಥಿತಿಗೆ ತಕ್ಕಂತೆ ನಾಯಕ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಗಂಭೀರ್ ಹೇಳಿದರು.
ಆದರೆ, ಜುಲೈ 2ರಿಂದ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಠಾಕೂರ್ ಅವರಿಗೆ ವಿಶ್ರಾಂತಿ ಕೊಡಬೇಕು. ಅವರ ಬದಲಿಗೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಯ್ಕೆ ಮಾಡುವುದು ಉತ್ತಮ ಎಂಬ ಸಲಹೆಗಳನ್ನು ಹಲವು ಮಾಜಿ ಕ್ರಿಕೆಟ್ ತಾರೆಗಳು ನೀಡಿದ್ದಾರೆ.
‘ನಾಲ್ವರು ವೇಗಿಗಳೊಂದಿಗೆ ಆಡುವುದರಲ್ಲಿ ಅರ್ಥವಿಲ್ಲ. ಶಾರ್ದೂಲ್ ಅಥವಾ ಪ್ರಸಿದ್ಧ ಅವರಿಗೆ ವಿಶ್ರಾಂತಿ ಕೊಡಬೇಕು. ಕುಲದೀಪ್ ಅವರನ್ನು ಆಡಿಸಬೇಕು’ ಎಂದು ಭಾರತ ತಂಡದ ಮಾಜಿ ನಾಯಕ ದಿಲೀಪ್ ವೆಂಗಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಪಿಚ್‌ಗಳಲ್ಲಿ ನಾಲ್ವರು ವೇಗಿಗಳನ್ನು ಆಡಿಸುವುದು ಬಹಳ ಹಳೆಯ ರೂಢಿಯಾಗಿದೆ. ಆದರೆ ಶುಷ್ಕ ವಾತಾವರಣದಲ್ಲಿ ಈ ಸೂತ್ರ ಹೆಚ್ಚು ಪರಿಣಾಮಕಾರಿಯಾಗುವುದರ ಬಗ್ಗೆ ಅನುಮಾನವಿದೆ. ಆದರೂ ರವೀಂದ್ರ ಜಡೇಜ ಮತ್ತು ಕುಲದೀಪ್ ಅವರನ್ನು ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸುವುದು ಕೂಡ ಎಷ್ಟರ ಮಟ್ಟಿಗೆ ಸರಿ. ಆದ್ದರಿಂದ ಜಡೇಜ ಅವರ ಬದಲಿಗೆ ಕುಲದೀಪ್ ಉತ್ತಮ ಆಯ್ಕೆ ಎಂಬ ಮಾತುಗಳೂ ಕೇಳಿಬರುತ್ತಿವೆ.
‘ಕುಲದೀಪ್ ಕಣಕ್ಕಿಳಿಯಬೇಕು. ಶಾರ್ದೂಲ್ ಹೊರಗುಳಿಯಬೇಕು. ಇದೊಂದು ಬದಲಾವಣೆಯು ಮುಂದಿನ ಪಂದ್ಯದ ಮಟ್ಟಿಗೆ ಅವಶ್ಯಕವಾಗಿದೆ’ ಎಂದು ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
‘ಮೊದಲ ಪಂದ್ಯದ ಸಂದರ್ಭದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದೆ. ಆಸ್ಟ್ರೇಲಿಯಾದಲ್ಲಿ ಅವರು ಮಾಡಿದ್ದ ಸಾಧನೆಯನ್ನು ಪರಿಗಣಿಸಿ ಆ ರೀತಿಯಾಗಿ ಹೇಳಿದ್ದೆ. ಆದರೆ ನಿತೀಶ್ ಅವರು ನಾಲ್ಕನೇ ವೇಗಿಯ ಪಾತ್ರವನ್ನು ಪೂರ್ಣಪ್ರಮಾಣದಲ್ಲಿ ವಹಿಸುವುದು ಕಷ್ಟಸಾಧ್ಯ. ಆದ್ದರಿಂದ ಮುಂದಿನ ಪಂದ್ಯಕ್ಕೆ ಭಾರತ ತಂಡವು ದಿಟ್ಟ ನಿರ್ಧಾರ ತೆಗೆದುಕೊಂಡು ಪರಿಣತ ಬೌಲರ್ ಆಯ್ಕೆಗೆ ಆದ್ಯತೆ ನೀಡಬೇಕು’ ಎಂದೂ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.
ಗಿಲ್‌ಗೆ ನಾಯಕ್ವದ ಪ್ರಭಾವಳಿ ಇಲ್ಲ: ಹುಸೇನ್
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ ನಂತರ ನೂತನ ನಾಯಕ ಶುಭಮನ್ ಗಿಲ್ ಅವರ ಕುರಿತು ಪರ ವಿರೋಧ ಹೇಳಿಕೆಗಳು ಸುದ್ದಿಯಾಗುತ್ತಿವೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಅವರೂ ತಮ್ಮ ಅಭಿಪ್ರಾಯವನ್ನು ಹರಿಬಿಟ್ಟಿದ್ದಾರೆ. ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇದ್ದಂತಹ ಪ್ರಭಾವಳಿಯು ಗಿಲ್ ಅವರಲ್ಲಿ ಕಾಣುತ್ತಿಲ್ಲ‘ ಎಂದು ಹುಸೇನ್ ಹೇಳಿದ್ದಾರೆ. 'ರೋಹಿತ್ ಅಥವಾ ಕೊಹ್ಲಿ ಅವರು ನಾಯಕರಾಗಿದ್ದ ಸಂದರ್ಭದಲ್ಲಿ ಮುಂದಾಳತ್ವ ವಹಿಸಿದವರು ಯಾರೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಈಗ ಹಾಗಿಲ್ಲ. ಕಣದಲ್ಲಿ ಇಬ್ಬರು ಮೂವರು ನಾಯಕರನ್ನು ಏಕಕಾಲಕ್ಕೆ ನೋಡಿದಂತಾಗಿದೆ. ಗಿಲ್ ಅವರಲ್ಲಿ ಆ ನಾಯಕತ್ವದ ಪ್ರಭಾವಳಿ ಎದ್ದು ಕಾಣುತ್ತಿಲ್ಲ’ ಎಂದಿದ್ದಾರೆ. ‘ಭಾರತಕ್ಕೆ ಉತ್ತಮ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳು ಯಾವಾಲಗೂ ಲಭಿಸಿದ್ದರು. ಅದರಲ್ಲಿ ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಪ್ರಮುಖರು. ಆದರೆ ಇಂಗ್ಲೆಂಡ್ ತಂಡವು ಮಧ್ಯಮವೇಗಿ ಆಲ್‌ರೌಂಡರ್‌ಗಳ ಶೋಧದಲ್ಲಿ ಈಗಲೂ ಇದೆ’ ಎಂದು ಹೇಳಿದರು.
ರಿಷಭ್ ಡಬಲ್ ಶತಕ: ಗೌತಮ್ ಪ್ರತಿಕ್ರಿಯೆ
ಮೊದಲ ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್ –ಬ್ಯಾಟರ್ ರಿಷಭ್ ಪಂತ್ ಅವರು ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದರು. ಆದರೆ ಈ ಕುರಿತು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತ್ರ ಈ ಸಾಧನೆಯ ಕುರಿತು ಮೆಚ್ಚುಗೆ ಮಾತುಗಳನ್ನಾಡಲು ಅದ್ಯಾಕೋ ಮನಸ್ಸು ಮಾಡಲಿಲ್ಲ. ಸುದ್ದಿಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಇದಲ್ಲದೇ ಇನ್ನೂ ಮೂರು ಶತಕಗಳೂ ಈ ಪಂದ್ಯದಲ್ಲಿ ನಮ್ಮವರಿಂದ ದಾಖಲಾಗಿವೆ. ಅವು ಕೂಡ ಈ ಪಂದ್ಯದ ಸಕಾರಾತ್ಮಕ ಅಂಶಗಳಾಗಿವೆ’ ಎಂದರು. ಮಾಧ್ಯಮ ಪ್ರತಿನಿಧಿಗಳು ರಿಷಭ್ ಸಾಧನೆಯ ಬಗ್ಗೆ ಮತ್ತೆ ಒತ್ತಿ ಕೇಳಿದಾಗ ‘ಒಂದೊಮ್ಮೆ ನೀವು ಯಶಸ್ವಿ (ಜೈಸ್ವಾಲ್) ನಾಯಕನಾಗಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಶುಭಮನ್ (ಗಿಲ್) ಕೆ.ಎಲ್. (ರಾಹುಲ್) ಅವರು ತಲಾ ಒಂದು ಶತಕ ಮತ್ತು ರಿಷಭ್ ಅವರಿಂದ ಎರಡು ಶತಕಗಳು ದಾಖಲಾಗಿರುವುದರ ಬಗ್ಗೆ ಕೇಳಿದ್ದರೆ ನನಗೆ ಇಷ್ಟವಾಗುತ್ತಿತ್ತು. ಪ್ರಶ್ನೆ ಇನ್ನೂ ಸೂಕ್ತವಾಗುತ್ತಿತ್ತು. ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಟೆಸ್ಟ್ ಸರಣಿಯಲ್ಲಿ ಉತ್ತಮ ಆರಂಭ’ ಎಂದರು. ‘ಬೂಮ್ರಾ ಐದು ವಿಕೆಟ್ ಗೊಂಚಲು ಗಳಿಸಿದ್ದು ಕೂಡ ನಮ್ಮ ಪಾಲಿಗೆ ಉತ್ತಮ ಸಾಧನೆ. ಆದರೆ ಫಲಿತಾಂಶ ನಮ್ಮ ಕೈತಪ್ಪಿದ್ದರಿಂದ ಈ ಎಲ್ಲ ಸಾಧನೆಗಳೂ ನೇಪಥ್ಯಕ್ಕೆ ಸರಿದವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.