ADVERTISEMENT

ಸದ್ಯ ‌ವಿಶ್ವಕಪ್‌ನತ್ತ ಗಮನಹರಿಸೋಣ, ಏಷ್ಯಾಕಪ್ ನಂತರದ ವಿಚಾರ: ರೋಹಿತ್ ಶರ್ಮಾ

ಪಿಟಿಐ
Published 22 ಅಕ್ಟೋಬರ್ 2022, 9:20 IST
Last Updated 22 ಅಕ್ಟೋಬರ್ 2022, 9:20 IST
ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ
ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ    

ಮೆಲ್ಬರ್ನ್‌: 'ಸದ್ಯದ ವಿಶ್ವಕಪ್‌ನತ್ತ ಗಮನ ಹರಿಸೋಣ. ಏಕೆಂದರೆ ಅದು ನಮಗೆ ಮುಖ್ಯವಾದ ಸಂಗತಿ. ಮುಂದೆ ಏನಾಗಲಿದೆ ಎಂಬ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆ ಮಾಡುವುದರಲ್ಲಿ ಅರ್ಥವೂ ಇಲ್ಲ'

ಮುಂದಿನ ವರ್ಷ ಪಾಕಿಸ್ತಾನದಲ್ಲಿ ಆಯೋಜನೆಯಾಗಲಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಭಾಗವಹಿಸಲಿದೆಯೇ ಎಂಬ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪ್ರತಿಕ್ರಿಯಿಸಿದ್ದು ಹೀಗೆ.

'ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ನಾಳಿನ (ಅಕ್ಟೋಬರ್‌ 23ರ) ಪಂದ್ಯವನ್ನು ಗೆಲ್ಲಲು ನಾವು ಹೇಗೆ ಸಿದ್ಧತೆ ನಡೆಸಬೇಕು ಎಂಬುದರತ್ತ ಚಿತ್ತ ಹರಿಸಿದ್ದೇವೆ' ಎಂದೂ ರೋಹಿತ್‌ ತಿಳಿಸಿದ್ದಾರೆ.

ADVERTISEMENT

ಮುಂದಿನ ವರ್ಷದ ಏಷ್ಯಾಕಪ್‌ ಟೂರ್ನಿಯು ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಲಿದೆ. ಈ ಕುರಿತು ಹೇಳಿಕೆ ನೀಡಿದ್ದ ಬಿಸಿಸಿಐ ಕಾರ್ಯದರ್ಶಿಜಯ್‌ ಶಾ,ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಬದಲಾಗಿಏಷ್ಯಾಕಪ್‌ ಟೂರ್ನಿಯನ್ನುತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ಜಯ್‌ ಶಾ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಹೌದು. ಅವರ ಹೇಳಿಕೆಗೆಪ್ರತಿಯಾಗಿ ಪಾಕಿಸ್ತಾನ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು. ಅಷ್ಟೇ ಅಲ್ಲದೆ, ಎಸಿಸಿ ಸದಸ್ಯ ಸ್ಥಾನ ತ್ಯಜಿಸುವ ಚಿಂತನೆ ನಡೆಸಿದೆ ಎಂದೂ ವರದಿಯಾಗಿತ್ತು.

ಜಯ್‌ ಶಾ ಹೇಳಿಕೆಯನ್ನು ಖಂಡಿಸಿ ಪಾಕಿಸ್ತಾನದ ಹಿರಿಯ ಕ್ರಿಕೆಟಿಗರು ವಾಗ್ದಾಳಿ ನಡೆಸಿದ್ದರು.

ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌,'ಭಾರತ ತಂಡದ ಪಾಕಿಸ್ತಾನ ಪ್ರವಾಸದ ಬಗ್ಗೆಕೇಂದ್ರ ಗೃಹ ಸಚಿವಾಲಯವುನಿರ್ಧಾರ ತೆಗೆದುಕೊಳ್ಳಲಿದೆ. ಆಟಗಾರರ ಭದ್ರತೆ ಮತ್ತು ಸುರಕ್ಷತೆಯು ಅತ್ಯಂತ ಮುಖ್ಯವಾದ ವಿಚಾರ' ಎಂದಿದ್ದರು.

ನಾಳೆ ಭಾರತ–ಪಾಕಿಸ್ತಾನ ಸೆಣಸಾಟ
ಈ ಬಾರಿಯ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌–12 ಹಂತದ ಪಂದ್ಯಗಳು ಇಂದಿನಿಂದ (ಅಕ್ಟೋಬರ್‌ 22) ಆರಂಭವಾಗಿವೆ. ಟೂರ್ನಿಯಲ್ಲಿ ತಾವಾಡುವ ಮೊದಲ ಪಂದ್ಯದಲ್ಲೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯವುನಾಳೆ (ಅಕ್ಟೋಬರ್‌ 23ರ) ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.