
ಆದಿತ್ಯ ಅಶೋಕ್
ಕ್ರಿಕೆಟ್ ಅನ್ನು ಭಾರತೀಯರು ಒಂದು ಹಬ್ಬದಂತೆ ಆಚರಿಸುತ್ತಾರೆ. ಅದಕ್ಕೆ ತಕ್ಕಂತೆ, ಭಾರತದಲ್ಲಿ ಕ್ರಿಕೆಟ್‌ಗೆ ಉಳಿದೆಲ್ಲಾ ಕ್ರೀಡೆಗಳಿಗಿಂತ ಹೆಚ್ಚಿನ ಪ್ರಾತಿನಿಧ್ಯ ದೊರಕಿದೆ. ಇದರ ಹೊರತಾಗಿಯೂ ಭಾರತ ಮೂಲದ ಅನೇಕ ಕ್ರಕೆಟಿಗರು ಬೇರೆ ಬೇರೆ ದೇಶಗಳ ಪರ ಆಡುತ್ತಿದ್ದಾರೆ.
ಕೇಶವ ಮಹರಾಜ್, ಉನ್ಮುಕ್ತ್ ಚಾಂದ್, ರವಿ ಬೊಪಾರ, ಶಿವನಾರಾಯಣ್ ಚಂದ್ರಪಾಲ್ ಹಾಗೂ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಪ್ರಕಟಗೊಂಡಿರುವ ಅಮೆರಿಕ ತಂಡದ ನಾಯಕ ಸೇರಿದಂತೆ ಅನೇಕ ಭಾರತೀಯ ಮೂಲದ ಕ್ರಿಕೆಟಿಗರು ಬೇರೆ ಬೇರೆ ದೇಶಗಳ ಪರ ಆಡುತ್ತಿದ್ದಾರೆ. ಕೆಲವರು ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ ನಿವೃತ್ತಿ ತೆಗೆದುಕೊಂಡಿದ್ದಾರೆ.
ಕೇಶವ ಮಹಾರಾಜ್ (ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಕುಟುಂಬದವರಾಗಿರುವ ಕೇಶವ್ ಮಹಾರಾಜ್ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರು. ತಮ್ಮ ಸ್ಥಿರ ಪ್ರದರ್ಶನದ ಮೂಲಕವೇ ದಕ್ಷಿಣ ಆಫ್ರಿಕಾ ತಂಡದ ಮೂರು ಮಾದರಿಯ ಕ್ರಿಕೆಟ್‌ನ ಖಾಯಂ ಸದಸ್ಯರಾಗಿದ್ದಾರೆ. ಮಾತ್ರವಲ್ಲ, ಇವರು ಭಾರತ ಹಾಗೂ ಇಲ್ಲಿನ ಆಚರಣೆಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ.
ತೇಜ ನಿಡಮನೂರು (ನೆದರ್ಲ್ಯಾಂಡ್)
ಭಾರತದ ವಿಜಯವಾಡದಲ್ಲಿ ಜನಿಸಿದ ತೇಜ ನಿಡಮನೂರು ಅವರು ಚಿಕ್ಕ ವಯಸ್ಸಿನಲ್ಲಿಯೇ ನ್ಯೂಜಿಲೆಂಡ್‌ಗೆ ವಲಸೆ ಹೋಗಿದ್ದಾರೆ. ಬ್ಯಾಟಿಂಗ್ ಜೊತೆ ಬೌಲಿಂಗ್‌ನಲ್ಲೂ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಅವರು ನೆದರ್ಲ್ಯಾಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾರತದಿಂದ ನ್ಯೂಜಿಲೆಂಡ್ ಬಳಿಕ ನೆದರ್ಲ್ಯಾಂಡ್ ದೇಶಗಳಿಗೆ ವಲಸೆ ಬಂದು ಕ್ರಿಕೆಟ್ ವೃತ್ತಿ ಜೀವನ ಕಟ್ಟಿಕೊಂಡಿದ್ದಾರೆ.
ಮಿಲಿಂದ ಕುಮಾರ್ (ಯುಎಸ್‌ಎ)
ಭಾರತದ ದೆಹಲಿಯಲ್ಲಿ ಜನಿಸಿದ ಮಿಲಿಂದ್ ಕುಮಾರ್, ಅಮೆರಿಕಕ್ಕೆ ವಲಸೆ ಹೋಗುವುದಕ್ಕೆ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಳಿಕ ಅಮೆರಿಕಾಗೆ ತೆರಳಿದ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಮೆರಿಕ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಮೊನಾಂಕ್ ಪಟೇಲ್
ಅಮೆರಿಕ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಮೊನಾಂಕ್ ಪಟೇಲ್ ಅವರು ಮೂಲತಃ ಭಾರತದವರು. ಅವರು, ಗುಜರಾತ್‌ನಲ್ಲಿ ಜನಿಸಿದವರು. ಸದ್ಯ, ಅಮೆರಿಕ ರಾಷ್ಟ್ರೀಯ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿರುವ ಅವರು, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡವನ್ನು ಮುನ್ನಡೆಸಲಿದ್ದಾರೆ.
ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್)
ಗಯಾನ ಮೂಲದ ಶಿವನಾರಾಯಣ್ ಚಂದ್ರಪಾಲ್ ಮೂಲತಃ ವೆಸ್ಟ್ ಇಂಡೀಸ್‌ನವರೇ. ಆದರೆ, ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಹಲವು ವರ್ಷಗಳ ಕಾಲ ವಿಂಡೀಸ್ ತಂಡದ ಆಧಾರಸ್ತಂಭವಾಗಿದ್ದ ಅವರು, ವೆಸ್ಟ್ ಇಂಡೀಸ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.
ಮಾಂಟಿ ಪನೇಸರ್ (ಇಂಗ್ಲೆಂಡ್)
ಮುದ್‌ಸುದೇನ್ ಸಿಂಗ್ ಮಾಂಟಿ ಪನೇಸರ್ ಅವರು ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಾರತದ ಪಂಜಾಬಿ ಪೋಷಕರಿಗೆ ಜನಿಸಿದವರು. ಅವರು ಇಂಗ್ಲೆಂಡ್ ಪರ 2006ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ತಮ್ಮ ಕ್ರಿಕೆಟ್ ಜರ್ನಿಯನ್ನು ಆರಂಭಿಸಿದರು. ಸ್ಪಿನ್ ಬೌಲರ್ ಆಗಿರುವ ಅವರು, ಇಂಗ್ಲೆಂಡ್ ಪರ ಅನೇಕ ಪಂದ್ಯಾವಳಿಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇಶ್ ಸೋಧಿ: (ನ್ಯೂಜಿಲೆಂಡ್)
ಭಾರತದ ಲುಧಿಯಾನದಲ್ಲಿ ಜನಿಸಿದ ಇಶ್ ಸೋಧಿ, ಚಿಕ್ಕ ವಯಸ್ಸಿನಲ್ಲೇ ನ್ಯೂಜಿಲೆಂಡ್‌ಗೆ ವಲಸೆ ಬಂದವರು. ಬಳಿಕ 2013 ರಲ್ಲಿ ನ್ಯೂಜಿಲೆಂಡ್ ಪರ ಪದಾರ್ಪಣೆ ಮಾಡಿದರು. ಸೋಧಿ ನ್ಯೂಜಿಲೆಂಡ್ ಪರ ಸೀಮಿತ ಓವರುಗಳಲ್ಲಿ ವಿಭಾಗದಲ್ಲಿ ತಂಡದ ಭಾಗವಾಗಿದ್ದಾರೆ.
ರವಿ ಬೋಪಾರ
ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಕುಟುಂಬಕ್ಕೆ ಸೇರಿದವರು. ರವಿ ಬೋಪಾರ ಅವರು ಇಂಗ್ಲೆಂಡ್ ಮೂರು ಮಾದರಿಯ ಕ್ರಿಕೆಟ್ ಆಡಿದ್ದಾರೆ. ಉತ್ತಮ ಬ್ಯಾಟಿಂಗ್ ಮತ್ತು ಮಧ್ಯಮ ವೇಗದ ಬೌಲರ್ ಆಗಿರುವ ಅವರು, 2007ರಲ್ಲಿ ಪಾದಾರ್ಪಣೆ ಮಾಡಿದರು. ಕ್ರಮೇಣ ಅವರು ಇಂಗ್ಲೆಂಡ್ ತಂಡದ ಪರ ಮೂರು ಮಾದರಿಯ ಕ್ರಿಕೆಟ್ ಖಾಯಂ ಸದಸ್ಯರಾಗಿದ್ದರು.
ಸುನಿಲ್ ನರೈನ್
ಟ್ರಿನಿಡಾಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಪೋಷಕರಿಗೆ ಜನಿಸಿದ ಸುನಿಲ್ ನರೈನ್, ಪ್ರಸ್ತುತ ಕಾಲಘಟ್ಟದ ನಿಗೂಢ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಅವರು, ವೆಸ್ಟ್ ಇಂಡೀಸ್ ಪರ 2011 ರಲ್ಲಿ ಪದಾರ್ಪಣೆ ಮಾಡಿದರು. ಬಳಿಕ ಅನೇಕ ಅದ್ಭುತ ಇನಿಂಗ್ಸ್‌ಗಳನ್ನು ಆಡುವ ಮೂಲಕ ಜಗತ್ತು ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. 2012 ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಲೂ ವಿಶ್ವದಾದ್ಯಂತ ಅನೇಕ ಲೀಗ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಚಿನ್ ರವೀಂದ್ರ (ನ್ಯೂಜಿಲೆಂಡ್)
ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಬೆಂಗಳೂರಿನ ಪೋಷಕರ ಮಗನಾಗಿರುವ ರಚಿನ್, ನ್ಯೂಜಿಲೆಂಡ್ ತಂಡದ ಅತ್ಯಂತ ಭರವಸೆಯ ಆಟಗಾರರಾಗಿದ್ದಾರೆ. ಬ್ಯಾಟಿಂಗ್ ಜೊತೆಗೆ ಸ್ಪಿನ್ ಬೌಲರ್ ಆಗಿರುವ ಅವರು 2021ರಲ್ಲಿ ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಅವರು ಜಗತ್ತು ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು.
ಆದಿತ್ಯ ಅಶೋಕ್ (ನ್ಯೂಜಿಲೆಂಡ್)
ನ್ಯೂಜಿಲೆಂಡ್ ತಂಡದಲ್ಲಿ ಸ್ಪಿನ್ನರ್ ಆಗಿ ಆಡುತ್ತಿರುವ ಆದಿತ್ಯ ಅಶೋಕ್ ತಮಿಳುನಾಡು ಮೂಲದವರಾಗಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ ಆತಿದ್ಯ 4 ವರ್ಷದವರಿದ್ದಾಗ ಅವರ ಕುಟುಂಬ ಉದ್ಯೋಗ ಹುಡುಕುತ್ತಾ ಆಕ್ಲೆಂಡ್‌ನಲ್ಲಿ ನೆಲೆ ಕಂಡುಕೊಂಡಿತು. ಕ್ರಮೇಣ ಕ್ರಿಕೆಟ್ನತ್ತ ಒಲವು ಹೆಚ್ಚಿಸಿಕೊಂಡ ಆದಿತ್ಯ ಆಕ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದರು. ಸದ್ಯ, ನ್ಯೂಜಿಲ್ಯಾಂಡ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.