ಪುರುಷರ ಎಫ್‌ಐಎಚ್ ಹಾಕಿ ಜೂನಿಯರ್ ವಿಶ್ವಕಪ್‌ನ ಲೋಗೊವನ್ನು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಗುರುವಾರ ಅನಾವರಣಗೊಳಿಸಿದರು.
(ಚಿತ್ರ ಕೃಪೆ–@Udhaystalin)
ಚೆನ್ನೈ: ಚೆನ್ನೈ ಮತ್ತು ಮದುರೈಯಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ನಡೆಯಲಿರುವ ಪುರುಷರ ಎಫ್‌ಐಎಚ್ ಹಾಕಿ ಜೂನಿಯರ್ ವಿಶ್ವಕಪ್‌ನ ಲೋಗೊವನ್ನು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಗುರುವಾರ ಅನಾವರಣಗೊಳಿಸಿದರು.
ಇದೇ ವೇಳೆ ಉದಯನಿಧಿ ಉಪಸ್ಥಿತಿಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೇಘನಾಥ ರೆಡ್ಡಿ ಮತ್ತು ಹಾಕಿ ಇಂಡಿಯಾ ಮಹಾ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ಒಡಂಬಡಿಕೆ ಪತ್ರಕ್ಕೆ ಸಹಿಹಾಕಿದರು.
ಜೂನಿಯರ್ ವಿಶ್ವಕಪ್‌ನ 14ನೇ ಆವೃತ್ತಿ ಆಯೋಜನೆ ಮತ್ತು ಮಧುರೈ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಸಿಂಥೆಟಿಕ್ ಟರ್ಫ್ ಹಾಸಲು ₹65 ಕೋಟಿ ಮಂಜೂರು ಮಾಡಲಾಗಿದೆ ಎಂದು ಉದಯನಿಧಿ ತಿಳಿಸಿದರು.
ಇದೇ ಮೊದಲ ಬಾರಿಗೆ ಜೂನಿಯರ್ ವಿಶ್ವಕಪ್‌ನಲ್ಲಿ 24 ತಂಡಗಳು ಭಾಗವಹಿಸುತ್ತಿವೆ. ಈ ಹಿಂದೆ 16 ತಂಡಗಳು ಇರುತ್ತಿದ್ದವು.
ಆರು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗುವುದು. ‘ಡ್ರಾ’ ಎತ್ತುವ ಸಮಾರಂಭ ಸ್ವಿಜರ್ಲೆಂಡ್‌ನ ಲುಸಾನ್‌ನಲ್ಲಿ ಇದೇ 24ರಂದು ನಡೆಯಲಿದೆ.
ಭಾರತ ಮೂರನೇ ಬಾರಿ ಈ ಟೂರ್ನಿಯ ಆತಿಥ್ಯ ವಹಿಸುತ್ತಿದೆ. ಈ ಹಿಂದೆ– 2016ರಲ್ಲಿ ಲಖನೌದಲ್ಲಿ ಮತ್ತು 2021ರಲ್ಲಿ ಭುವನೇಶ್ವರದಲ್ಲಿ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.