ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಮುಂಬರುವ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ₹13.20 ಲಕ್ಷ ಗಳಿಸಿದರು. ಇದರೊಂದಿಗೆ ಈ ಬಿಡ್‌ನಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಟಗಾರನಾದರು. ಅವರನ್ನು ಹುಬ್ಬಳ್ಳಿ ಟೈಗರ್ಸ್ ತಂಡವು ಸೆಳೆದುಕೊಂಡಿತು.
ಮಂಗಳವಾರ ಇಲ್ಲಿ ನಡೆದ ಬಿಡ್‌ನಲ್ಲಿ ಅಭಿನವ್ ಮನೋಹರ್ ಮತ್ತು ಮನೀಷ್ ಪಾಂಡೆ ಅವರು ಪಡಿಕ್ಕಲ್ ಅವರಿಗಿಂತ ಒಂದು ಲಕ್ಷ ರೂಪಾಯಿ (ತಲಾ ₹ 12.20 ಲಕ್ಷ) ಕಡಿಮೆ ಮೊತ್ತ ಪಡೆದರು. ಅಭಿನವ್ ಕೂಡ ಹುಬ್ಬಳ್ಳಿ ತಂಡಕ್ಕೆ ಸೇರ್ಪಡೆಯಾದರು. ಅದರೆ ಹೋದ ಬಾರಿ ಹುಬ್ಬಳ್ಳಿ ಟೈಗರ್ಸ್‌ನಲ್ಲಿದ್ದ ಪಾಂಡೆ ಈ ಸಲ ಮೈಸೂರು ವಾರಿಯರ್ಸ್ ಬಳಗಕ್ಕೆ ಜಿಗಿದರು.
ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರನ್ನು ಸೆಳೆದುಕೊಳ್ಳಲು ಪೈಪೋಟಿ ಏರ್ಪಟ್ಟಿತ್ತು. ಪಟ್ಟು ಬಿಡದ ಶಿವಮೊಗ್ಗ ಲಯನ್ಸ್ ₹ 10.80 ಲಕ್ಷಕ್ಕೆ ವಿದ್ವತ್ ಅವರನ್ನು ಖರೀದಿಸಿತು. ಇನ್ನೊಂದೆಡೆ ವೇಗಿ ವಿದ್ಯಾಧರ್ ಪಾಟೀಲ ಅವರನ್ನು ಬೆಂಗಳೂರು ಬ್ಲಾಸ್ಟರ್ಸ್ ತಂಡವು ₹ 8.30 ಲಕ್ಷ ನೀಡಿ ತನ್ನದಾಗಿಸಿಕೊಂಡಿತು.
ಆಲ್‌ರೌಂಡರ್‌ಗಳನ್ನು ಖರೀದಿಸುವಲ್ಲಿ ಮೈಸೂರು ವಾರಿಯರ್ಸ್ ತಂಡವು ಹೆಚ್ಚು ಆಸಕ್ತಿ ತೋರಿತು. ಕೆ.ಗೌತಮ್ (₹4.40ಲಕ್ಷ), ಯಶೋವರ್ಧನ್ ಪರಂತಾಪ್ (₹2 ಲಕ್ಷ), ಎಲ್.ಆರ್. ಕುಮಾರ್ (₹ 1.50ಲಕ್ಷ), ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ (₹4.70ಲಕ್ಷ), ವೇಗಿ ಎಂ. ವೆಂಕಟೇಶ್ (₹2 ಲಕ್ಷ) ಮತ್ತು ಗೌತಮ್ ಮಿಶ್ರಾ (₹2.25ಲಕ್ಷ) ಅವರನ್ನು ಮೈಸೂರು ತಂಡವು ಸೆಳೆದುಕೊಂಡಿತು. ಉದಯೋನ್ಮುಖ ವಿಕೆಟ್‌ಕೀಪರ್ ಹರ್ಷಿಲ್ ಧರ್ಮಾನಿ ಕೂಡ ಮೈಸೂರು ಪಾಲಾದರು.
ಬೆಂಗಳೂರು ತಂಡವು ಈ ಮೊದಲೇ ಮಯಂಕ್ ಅಗರವಾಲ್ (₹ 14 ಲಕ್ಷ) ಅವರನ್ನು ರಿಟೇನ್ ಮಾಡಿಕೊಂಡಿತ್ತು. ಆದ್ದರಿಂದ ಎ ಕೆಟಗರಿ ಆಟಗಾರರತ್ತ ಹೆಚ್ಚು ಒಲವು ತೋರಲಿಲ್ಲ. ಭರವಸೆಯ ಆಟಗಾರರ ಮೇಲೆ ವಿಶ್ವಾಸವಿಟ್ಟಿತು. ಎಲ್.ಆರ್. ಚೇತನ್, ರೋಹನ್ ಪಾಟೀಲ, ವಿದ್ಯಾಧರ್ ಪಾಟೀಲ, ರೋಹನ್ ನವೀನ್ ಮತ್ತು 16 ವರ್ಷ ವಯಸ್ಸಿನ ಮಾಧವ ಪ್ರಕಾಶ್ ಬಜಾಜ್ ಅವರನ್ನು ತಂಡಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಹುಬ್ಬಳ್ಳಿ ತಂಡವು ಅಗ್ರಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ಗಟ್ಟಗೊಳಿಸುವ ನಿಟ್ಟಿನಲ್ಲಿ ಆಟಗಾರರನ್ನು ಖರೀದಿಸಿತು. ಗುಲ್ಬರ್ಗ ತಂಡವು ವಿಕೆಟ್‌ಕೀಪರ್ ಕೆ.ವಿ. ಸಿದ್ಧಾರ್ಥ್, ವೇಗಿ ಮೊನಿಷ್ ರೆಡ್ಡಿ, ಹೋದ ಬಾರಿಯ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಗಳಿಸಿದ್ದ ಲವಿಶ್ ಕೌಶಲ್ ಅವರಿಗೆ ಮಣೆ ಹಾಕಿತು. ಕರ್ನಾಟಕ ತಂಡದ ಆರಂಭಿಕ ಆಟಗಾರ ನಿಕಿನ್ ಜೋಸ್ ಅವರಿಗೆ ಒಂದುಲಕ್ಷ ರೂಪಾಯಿ ನೀಡಿ ಖರೀದಿಸಿತು.
ಅನುಭವಿ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ₹ 8.60 ಲಕ್ಷ ಅವರನ್ನು ಮಂಗಳೂರು ಡ್ರ್ಯಾಗನ್ಸ್ ತಂಡವು ಸೆಳೆದುಕೊಂಡಿತು.
ಈ ಸಲದ ಟೂರ್ನಿಯು ಆಗಸ್ಟ್ 11 ರಿಂದ 27ರವರೆಗೆ ನಡೆಯಲಿದೆ. ಎಲ್ಲ ಪಂದ್ಯಗಳನ್ನೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.