ADVERTISEMENT

ICC ಮಹಿಳಾ ಏಕದಿನ ಕ್ರಿಕೆಟ್‌: ಸ್ಮೃತಿ ಮಂದಾನಾಗೆ ವರ್ಷದ ಕ್ರಿಕೆಟರ್‌ ಗೌರವ

ಪಿಟಿಐ
Published 27 ಜನವರಿ 2025, 10:18 IST
Last Updated 27 ಜನವರಿ 2025, 10:18 IST
<div class="paragraphs"><p>ಸ್ಮೃತಿ ಮಂದಾನಾ</p></div>

ಸ್ಮೃತಿ ಮಂದಾನಾ

   

ಪಿಟಿಐ ಚಿತ್ರ

ದುಬೈ: 2024ರಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಮಹಿಳಾ ಕ್ರಿಕೆಟ್‌ನ ಓಪನರ್ ಸ್ಮೃತಿ ಮಂದಾನಾ ಅವರನ್ನು ಮಹಿಳಾ ಏಕದಿನ ಕ್ರಿಕೆಟ್‌ನ ವರ್ಷದ ಆಟಗಾರ್ತಿ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಘೋಷಿಸಿದೆ.

ADVERTISEMENT

ಭಾರತ ತಂಡದ ಉಪನಾಯಕಿಯೂ ಆಗಿರುವ ಮಂದಾನಾ ಅವರು 2018 ಹಾಗೂ 2021ರಲ್ಲೂ ಐಸಿಸಿ ಮಹಿಳಾ ಕ್ರಿಕೆಟ್‌ನ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು. ಎಡಗೈ ಬ್ಯಾಟರ್ ಆದ ಮಂದಾನಾ ಅವರು 2024ರಲ್ಲಿ 13 ಇನಿಂಗ್ಸ್‌ನಲ್ಲಿ 747 ರನ್‌ ಕಲೆಹಾಕಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದ ಲೌರಾ ವೋಲ್ವಾರ್ಟ್‌ (697 ರನ್), ಇಂಗ್ಲೆಂಡ್‌ನ ಟ್ಯಾಮಿ ಬೀಮಾಂಟ್‌ (554) ಮತ್ತು ವೆಸ್ಟ್‌ ಇಂಡೀಸ್‌ನ ಹ್ಯಾಲಿ ಮ್ಯಾಥ್ಯೂಸ್‌ (469) ಅವರನ್ನು ಹಿಂದಿಕ್ಕಿದ್ದಾರೆ.

ಇಷ್ಟೇ ಅಲ್ಲದೆ, ಮಂದಾನಾ ಅವರು ಈ ಒಂದು ವರ್ಷದಲ್ಲಿ 95 ಬೌಂಡ್ರಿ ಹಾಗೂ ಗರಿಷ್ಠ ಬಾರಿ ಸಿಕ್ಸರ್‌ ಸಿಡಿಸಿದ್ದಾರೆ. 28 ವರ್ಷದ ಮಂದಾನಾ ಅವರು 57.86 ಸರಾಸರಿಯೊಂದಿಗೆ 95.15ರಷ್ಟು ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಜೂನ್‌ನಲ್ಲಿ ನಡೆದ ಸರಣಿಯಲ್ಲಿ ಶತಕಗಳನ್ನು ಸಿಡಿಸಿದ್ದಾರೆ. ಆ ಸರಣಿಯನ್ನು ಭಾರತ 3–0 ಇಂದ ಗೆದ್ದುಕೊಂಡಿತು.

ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್‌ನಲ್ಲಿ ನಡೆದ ಪಂದ್ಯದಲ್ಲಿ ಮಂದಾನಾ ಅವರು ಶತಕದೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪರಿಣಾಮ ಭಾರತ ಸರಣಿ ಕೈವಶ ಮಾಡಿಕೊಂಡಿತು. ಜತೆಗೆ ಬೌಲಿಂಗ್‌ನಲ್ಲೂ ಮಂದಾನಾ ಮಿಂಚಿದ್ದಾರೆ. ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಮಂದಾನಾ ಅವರು 105 ರನ್‌ ಗಳಿಸಿದ್ದರು. 109 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಹಾಗೂ 14 ಬೌಂಡ್ರಿಗಳನ್ನು ಕಲೆಹಾಕಿದ್ದರು. ಆ ಮೂಲಕ ಆಸ್ಟ್ರೇಲಿಯಾಗೆ ನಡುಕ ಹುಟ್ಟಿಸಿದ್ದರು.

ಒಮರ್‌ಝೈಗೆ ಗೌರವ:

ಪುರುಷರ ವಿಭಾಗದಲ್ಲಿ ಅಫ್ಗಾನಿಸ್ತಾನದ ಆಲ್‌ರೌಂಡರ್ ಅಜ್ಮತ್‌ವುಲ್ಲಾ ಒಮರ್‌ಝೈ ಅವರು ಚುರುಕಿನ ವೇಗದ ದಾಳಿ ಮತ್ತು ಬಿರುಸಿನ ಬ್ಯಾಟಿಂಗ್‌ನಿಂದಾಗಿ ಸೋಮವಾರ ಐಸಿಸಿ ಪುರುಷರ ಏಕದಿನ ಕ್ರಿಕೆಟರ್‌ 2024 ಗೌರವಕ್ಕೆ ಭಾಜನರಾಗಿದ್ದಾರೆ.

24 ವರ್ಷದ ಒಮರ್‌ಝೈ ಅವರು ಟಿ20 ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲೂ ಪ್ರಭಾವಿ ಎನಿಸಿದ್ದರು.

ಅವರು ತಮ್ಮ ತಂಡದ ಪರ ರಹಮಾನುಲ್ಲಾ ಗುರ್ಬಾಝ್ ನಂತರ ಎರಡನೇ ಅತಿ ಹೆಚ್ಚಿನ ರನ್ ಗಳಿಸಿದ್ದರು. ಸ್ಪಿನ್ನರ್ ಎ.ಎಮ.ಘಝನ್‌ಫರ್‌ ನಂತರ ಎರಡನೇ ಅತಿ ಯಶಸ್ವಿ ಬೌಲರ್ ಎನಿಸಿದ್ದರು. ಅವರು ಕಳೆದ ವರ್ಷ 417 ರನ್ ಕಲೆಹಾಕಿದ್ದರೆ, ಚೆಂಡಿನಲ್ಲೂ ಪರಿಣಾಮಕಾರಿ ಎನಿಸಿ 14 ಪಂದ್ಯಗಳಿಂದ 17 ವಿಕೆಟ್‌ ಬಳಿಸಿದ್ದರು.

ಅವರ ಸ್ಥಿರ ಪ್ರದರ್ಶನದ ಪರಿಣಾಮ ಅಫ್ಗನ್‌ ತಂಡ ಸತತವಾಗಿ ನಾಲ್ಕು ಸರಣಿ ಜಯ (ಐರ್ಲೆಂಡ್‌, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ) ವಿರುದ್ಧ ಸರಣಿ ಜಯಿಸಿತ್ತು. 52.12 ಸರಾಸರಿಯಲ್ಲಿ ರನ್ ಗಳಿಸಿದ್ದರೆ, 20.47 ಸರಾಸರಿಯಲ್ಲಿ ವಿಕೆಟ್‌ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.