ADVERTISEMENT

ಮಂಕಡಿಂಗ್‌ ವಿವಾದಕ್ಕೆ ಗಲ್ಲಿ ಕ್ರಿಕೆಟ್‌ ಹುಡುಗರಿಂದ ಪರಿಹಾರ! 

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 3:52 IST
Last Updated 9 ಏಪ್ರಿಲ್ 2019, 3:52 IST
   

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಮಂಕಡಿಂಗ್‌ ಸಮಸ್ಯೆಗೆ ಗಲ್ಲಿ ಕ್ರಿಕೆಟ್‌ ಹುಡುಗರು ಪರಿಹಾರ ಕಂಡುಕೊಂಡಿದ್ದಾರೆ! ಅಷ್ಟೇ ಅಲ್ಲ ಹುಡುಗರ ಈಪರಿಹಾರ ಕ್ರಿಕೆಟ್‌ನಲ್ಲೇನಾದರೂ ಜಾರಿಯಾದರೆ, ಬಹುಶಃ ರನ್‌ ಔಟ್‌ ಎಂಬುದೇ ಅಸ್ತಿತ್ವ ಕಳೆದುಕೊಳ್ಳಬಹುದೇನೋ...

ಕೇರಳದ್ದು ಎನ್ನಲಾದ ಗಲ್ಲಿ ಕ್ರಿಕೆಟ್‌ನ ವಿಡಿಯೊವೊಂದನ್ನು ‘ಗ್ರೇ ನಿಕೊಲಸ್‌’ ಎಂಬ ಕ್ರಿಕೆಟ್‌ ಪರಿಕರಗಳ ಉತ್ಪಾದಕ ಸಂಸ್ಥೆಯೊಂದು ತನ್ನ ಟ್ವಿಟರ್‌ಖಾತೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ನಾನ್‌ ಸ್ಟ್ರೈಕ್‌ ಎಂಡ್‌ನಲ್ಲಿರುವ ಮತ್ತೊಬ್ಬ ಬ್ಯಾಟ್ಸ್‌ಮನ್‌ ಉದ್ದನೇಯ ತೆಂಗಿನ ಗರಿಯ ದಿಂಡನ್ನು ಬ್ಯಾಟ್‌ ಮಾದರಿಯಲ್ಲಿ ಹಿಡಿದುಕೊಂಡು ಪಿಚ್‌ನ ಅರ್ಧಭಾಗಕ್ಕೆ ಬಂದು ನಿಂತು, ಬ್ಯಾಟ್‌ ಅನ್ನು ಅತ್ತ ಕಡೆಯ ಸ್ಕ್ರೀಸ್‌ಗೆ ಒಂದು ಬಾರಿ, ಇತ್ತ ಕಡೆಯ ಸ್ಕ್ರೀಸ್‌ಗೆ ಒಂದು ಬಾರಿ ಇಡುತ್ತಾ ರನ್‌ ಗಳಿಸುತ್ತಾನೆ. ಓಟವೇ ಓಡದ ಆತ ಕೇವಲ ಉದ್ದನೇಯ ಕೋಲಿನಿಂದ ರನ್‌ಗಳಿಸುತ್ತಿರುವ ಆ ವಿಡಿಯೊ ಈಗ ವೈರಲ್‌ ಆಗಿದೆ.

ಸದ್ಯ ಈವಿಡಿಯೊ ಸಾಮಾಜಿಕ ಜಾಲತಾಣಿಗರನ್ನು ರಂಜಿಸುತ್ತಿದೆ. ನಗೆ ಉಕ್ಕುವಂತೆ ಮಾಡುತ್ತಿದೆ. ಐಪಿಎಲ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಮಂಕಡಿಂಗ್‌ ಸಮಸ್ಯೆಗೆಈ ಹುಡುಗರ ತಂತ್ರ ಪರಿಹಾರವಾಗಬಲ್ಲದು ಎಂದು ಹಲವರು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಒಂದು ವೇಳೆ ಈ ಬ್ಯಾಟ್‌ ಅನ್ನು ಜೋಸ್‌ ಬಟ್ಲರ್‌ ಬಳಸಿದ್ದಿದ್ದರೆ ಅಂದು ಅಶ್ವಿನ್ ಅವರಿಂದ ಮಂಕಡ್‌ ಆಗುತ್ತಲೇ ಎಂದು ಹಲವು ಟ್ವಿಟರಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಬ್ಯಾಟ್ ಬಳಸಿದರೆ ರನ್‌ ಔಟ್‌ನ ಮಾತೇ ಇರದೂ ಎಂದೂ ಕೆಲವರು ಬರೆದುಕೊಂಡಿದ್ದಾರೆ.

ಈ ಸಾಲಿನ ಐಪಿಎಲ್‌ ಆವೃತ್ತಿಯಲ್ಲಿ ಪಂಜಾಬ್‌ ಮತ್ತು ರಾಜಸ್ಥಾನ ತಂಡಗಳ ನಡುವೆ ನಡೆದ ಪಂದ್ಯದ ವೇಳೆ ಪಂಜಾಬ್‌ತಂಡದ ನಾಯಕ ಆಶ್ವಿನ್‌ ಅವರು ರಾಜಸ್ಥಾನ ತಂಡದ ಜೋಸ್ ಬಟ್ಲರ್‌ ಅವರನ್ನು ಮಂಕಡ್‌ ಮಾಡಿ ಬಲೆಗೆ ಕೆಡೆವಿದ್ದರು. ಈ ವಿಧಾನ ಕ್ರಿಕೆಟ್‌ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದು ಸಾತ್ವಿಕ, ನೈತಿಕ ಕ್ರಿಕೆಟ್‌ ಅಲ್ಲ ಎಂಬ ವಾದಗಳೂ ಕೇಳಿಬಂದಿದ್ದವು.

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.