ADVERTISEMENT

ಕೇಂದ್ರೀಯ ಗುತ್ತಿಗೆಗೂ ನಮಗೂ ಸಂಬಂಧವಿಲ್ಲ: ರಾಹುಲ್ ದ್ರಾವಿಡ್

ಪಿಟಿಐ
Published 9 ಮಾರ್ಚ್ 2024, 14:49 IST
Last Updated 9 ಮಾರ್ಚ್ 2024, 14:49 IST
<div class="paragraphs"><p>ರಾಹುಲ್ ದ್ರಾವಿಡ್</p></div>

ರಾಹುಲ್ ದ್ರಾವಿಡ್

   

(ಪಿಟಿಐ ಚಿತ್ರ)

ಧರ್ಮಶಾಲಾ: ‘ಆಟಗಾರರ ಗುತ್ತಿಗೆಯನ್ನು ನಾನು ನಿರ್ಧರಿಸುವುದಿಲ್ಲ. ಆಯ್ಕೆಗಾರರು ಮತ್ತು ಮಂಡಳಿ (ಬಿಸಿಸಿಐ) ನಿರ್ಧರಿಸುತ್ತದೆ. ನನಗೆ ಅದರ ಮಾನದಂಡಗಳೂ (ಸೇರ್ಪಡೆಗೆ) ಗೊತ್ತಿಲ್ಲ. ನಾನು ಮತ್ತು ರೋಹಿತ್‌ ಪಂದ್ಯದಲ್ಲಿ ಆಡುವ 11ರ ತಂಡವನ್ನಷ್ಟೇ ಆಯ್ಕೆ ಮಾಡುತ್ತೇವೆ...’

ADVERTISEMENT

– ಹೀಗೆಂದು ಹೇಳಿದವರು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್. ಕೇಂದ್ರೀಯ ಗುತ್ತಿಗೆಗೆ ಸಂಬಂಧಿಸಿದಂತೆ ಎದ್ದಿರುವ ಈ ಸೂಕ್ಷ್ಮ ವಿಷಯದ ಬಗ್ಗೆ ಅವರು ಶನಿವಾರ ಅಂತಿಮ ಟೆಸ್ಟ್‌ ಪಂದ್ಯ ಗೆದ್ದ ನಂತರ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

‘ಆಟಗಾರ ಗುತ್ತಿಗೆಯಡಿ ಬರುತ್ತಾರೊ, ಇಲ್ಲವೇ ಎಂಬ ಬಗ್ಗೆ ನಾವು ಚರ್ಚಿಸಿಯೇ ಇಲ್ಲ. ಗುತ್ತಿಗೆ ಆಟಗಾರರ ಪಟ್ಟಿಯ ಬಗ್ಗೆಯೂ ನನಗೆ ಮಾಹಿತಿಯಿಲ್ಲ’ ಎಂದರು.

ಭಾರತ ತಂಡದ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕಳೆದ ತಿಂಗಳು ಬಿಸಿಸಿಐ, ಕೇಂದ್ರೀಯ ಆಟಗಾರರ ಪಟ್ಟಿಯಿಂದ ಕೈಬಿಟ್ಟಿತ್ತು.

ವಿಶ್ರಾಂತಿಯ ಕಾರಣ ನೀಡಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಅರ್ಧದಲ್ಲಿ ನಿರ್ಗಮಿಸಿದ್ದ ಇಶಾನ್ ನಂತರ ಹಾರ್ದಿಕ್ ಪಾಂಡ್ಯ ಜೊತೆ ಬರೋಡಾದ ಖಾಸಗಿ ಕೇಂದ್ರದಲ್ಲಿ ಐಪಿಎಲ್‌ಗೆ ಸಿದ್ಧತೆ ನಡೆಸಿದ್ದು ಚರ್ಚೆಗೆ ಕಾರಣವಾಗಿತ್ತು. ಜಾರ್ಖಂಡ್ ಪರ ಪಂದ್ಯ ಆಡಲು ಲಭ್ಯರಿದ್ದರೂ,  ಆಡಿರಲಿಲ್ಲ. ಭಾರತ ತಂಡದಿಂದ ಹೊರಬಿದ್ದ ಶ್ರೇಯಸ್‌ ಅಯ್ಯರ್ ಕೂಡ ಮುಂಬೈ ಪರ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ತಪ್ಪಿಸಿಕೊಂಡಿದ್ದರು.

‘ಯಾರೂ ಮರೆಗೆ ಸರಿದಿಲ್ಲ. ಯಾರಿಗೂ ತಂಡದ ಬಾಗಿಲು ಮುಚ್ಚಿಲ್ಲ. ಇವರಿಬ್ಬರು ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ತಂಡಕ್ಕೆ ಬರಲು ಅವಕಾಶವಿದೆ. ಅವರಿಬ್ಬರೂ ಫಿಟ್‌ ಆಗಿ, ಒಳ್ಳೆಯ ಪ್ರದರ್ಶನ ನೀಡಿ, ಆಯ್ಕೆಗಾರರೇ ತಂಡಕ್ಕೆ ಸೇರ್ಪಡೆ ಮಾಡುವಂತಾಗಲಿ‘ ಎಂದು ಆಶಿಸಿದರು.

ದೇಶಿಯ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಸಮಗ್ರ ಬದಲಾವಣೆ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ದ್ರಾವಿಡ್‌ ಅಭಿಪ್ರಾಯಪಟ್ಟರು. 

ರಣಜಿ ಟ್ರೋಫಿ ಪಂದ್ಯಗಳನ್ನು ಜನವರಿಯಿಂದ ಮಾರ್ಚ್‌ ಮಧ್ಯದೊಳಗೆ ಅವಸರದಲ್ಲಿ ಮುಗಿಸಿದ ಕಾರಣ ಆಟಗಾರರಿಗೆ ಪಂದ್ಯಗಳ ನಡುವೆ ಸಾಕಷ್ಟು ಬಿಡುವೇ ಇರಲಿಲ್ಲ ಎಂದು ಶಾರ್ದೂಲ್ ಠಾಕೂರ್ ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.