ಮುಂಬೈ ಇಂಡಿಯನ್ಸ್
(ಪಿಚಿಐ ಚಿತ್ರ)
ಜೈಪುರ: 2025ನೇ ಸಾಲಿನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 100 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ 2012ರ ಬಳಿಕ ಜೈಪುರದಲ್ಲಿ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ರಿಯಾನ್ ರಿಕೆಲ್ಟನ್ (61), ರೋಹಿತ್ ಶರ್ಮಾ (53), ಸೂರ್ಯಕುಮಾರ್ ಯಾದವ್ (48*) ಹಾಗೂ ಹಾರ್ದಿಕ್ ಪಾಂಡ್ಯ (48*) ಬಿರುಸಿನ ಆಟದ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 217 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಈ ಗುರಿ ಬೆನ್ನಟಿದ್ದ ರಾಜಸ್ಥಾನ 16.1 ಓವರ್‌ಗಳಲ್ಲಿ 117 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ ಮೂರು ಹಾಗೂ ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಗಳಿಸಿದರು.
ಸತತ 6ನೇ ಗೆಲುವು, ಅಗ್ರಸ್ಥಾನಕ್ಕೆ ಮುಂಬೈ ಲಗ್ಗೆ...
ಮೊದಲ ಐದು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಮುಂಬೈ ಇಂಡಿಯನ್ಸ್, ಆ ಬಳಿಕದ ಆರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿರುವ ಮುಂಬೈ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈವರೆಗೆ ಆಡಿರುವ 11 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ ಒಟ್ಟು 14 ಅಂಕಗಳನ್ನು ಸಂಪಾದಿಸಿದೆ.
2008 ಹಾಗೂ 2017ರ ಆವೃತ್ತಿಗಳಲ್ಲೂ ಮುಂಬೈ ಸತತ ಆರು ಗೆಲುವುಗಳನ್ನು ದಾಖಲಿಸಿತ್ತು.
ರಾಜಸ್ಥಾನ ಹೊರಕ್ಕೆ...
ಮತ್ತೊಂದೆಡೆ ಮುಂಬೈ ವಿರುದ್ಧ ಸೋಲಿನ ಆಘಾತಕ್ಕೊಳಗಾಗಿರುವ ರಾಜಸ್ಥಾನ, ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಹೊರಬಿದ್ದಿರುವ ಎರಡನೇ ತಂಡ ಎನಿಸಿದೆ. ರಾಜಸ್ಥಾನ 11 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳನ್ನು ಸಾಧಿಸಿದೆ. ಇನ್ನುಳಿದ ಮೂರು ಪಂದ್ಯಗಳು ಕೇವಲ ಪ್ರತಿಷ್ಠೆಗಷ್ಟೇ ಸೀಮಿತಗೊಂಡಿದೆ.
14ರ ಹರೆಯದ ಸೂರ್ಯವಂಶಿ ಶೂನ್ಯಕ್ಕೆ ಔಟ್...
ಕಳೆದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದ 14ರ ಹರೆಯದ ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.
ವೈಭವ್ ಸೇರಿದಂತೆ ರಾಜಸ್ಥಾನದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಯಶಸ್ವಿ ಜೈಸ್ವಾಲ್ (13), ನಿತೀಶ್ ರಾಣಾ (9), ನಾಯಕ ರಿಯಾನ್ ಪರಾಗ್ (16), ಧ್ರುವ್ ಜುರೇಲ್ (11), ಶಿಮ್ರಾನ್ ಹೆಟ್ಮೆಯರ್ (0) ಹಾಗೂ ಶುಭಂ ದುಬೆ (15) ನಿರಾಸೆ ಮೂಡಿಸಿದರು.
ಮುಂಬೈ ಪರ ರೋಹಿತ್ 6,000 ರನ್ ದಾಖಲೆ...
ಮುಂಬೈ ಪರ ರೋಹಿತ್ ಶರ್ಮಾ 6,000 ರನ್‌ಗಳ ದಾಖಲೆ ಬರೆದಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಬಳಿಕ ತಂಡವೊಂದರ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ 8,871 ರನ್ ಗಳಿಸಿದ್ದಾರೆ.
ಮುಂಬೈ ದಾಖಲೆ...
ಐಪಿಎಲ್‌ನಲ್ಲಿ 200 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ ಸಂದರ್ಭದಲ್ಲಿ ಮುಂಬೈ ಈವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಅಲ್ಲದೆ 17-0 ಗೆಲುವಿನ ಅಂತರವನ್ನು ಕಾಯ್ದುಕೊಂಡಿದೆ.
ರನ್ ಬೇಟೆಯಲ್ಲಿ ಸೂರ್ಯ ಅಗ್ರ...
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮಗದೊಮ್ಮೆ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಆ ಮೂಲಕ 'ಆರೆಂಜ್ ಕ್ಯಾಪ್' ತಮ್ಮದಾಗಿಸಿಕೊಂಡಿದ್ದಾರೆ. ಸೂರ್ಯ 11 ಪಂದ್ಯಗಳಲ್ಲಿ ಒಟ್ಟು 475 ರನ್ ಗಳಿಸಿದ್ದಾರೆ.
ಸಾಯಿ ಸುದರ್ಶನ್ ಎರಡನೇ (456) ಹಾಗೂ ವಿರಾಟ್ ಕೊಹ್ಲಿ (443) ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.