ADVERTISEMENT

ಐಪಿಎಲ್‌ ಮಿನಿ ಹರಾಜು: ಕರನ್‌, ಸ್ಟೋಕ್ಸ್‌ಗೆ ಭಾರಿ ಬೆಲೆ ಸಾಧ್ಯತೆ

ಕಣದಲ್ಲಿ 87 ಆಟಗಾರರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 9:04 IST
Last Updated 23 ಡಿಸೆಂಬರ್ 2022, 9:04 IST
   

ಕೊಚ್ಚಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ಶುಕ್ರವಾರ ನಡೆಯಲಿದ್ದು, ಕಣದಲ್ಲಿರುವ 87 ಆಟಗಾರರ ಖರೀದಿಗಾಗಿ 10 ಫ್ರಾಂಚೈಸ್‌ಗಳು ಪೈಪೋಟಿ ನಡೆಸಲಿವೆ.

ತಮಗೆ ಬೇಕಾದ ಪ್ರಮುಖ ಆಟಗಾರರನ್ನು ಈಗಾಗಲೇ ಉಳಿಸಿಕೊಂಡಿರುವ ಫ್ರಾಂಚೈಸ್‌ಗಳು, ಮಿನಿ ಹರಾಜಿನ ಮೂಲಕ ತಂಡಗಳಿಗೆ ಅಂತಿಮ ರೂಪ ನೀಡಲಿವೆ.

ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರನ್‌ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರು ಭಾರಿ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಭಾರತದ ಬ್ಯಾಟರ್‌ಗಳ ಪೈಕಿ ಮಯಂಕ್ ಅಗರವಾಲ್‌, ಅಜಿಂಕ್ಯ ರಹಾನೆ ಅವರು ಹರಾಜು ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ.

ADVERTISEMENT

ಪಂಜಾಬ್‌ ಕಿಂಗ್ಸ್‌ ತಂಡದ ನಾಯಕರಾಗಿದ್ದ ಮಯಂಕ್‌ ಅವರನ್ನು ಫ್ರಾಂಚೈಸ್‌ ತನ್ನಲ್ಲೇ ಉಳಿಸಿಕೊಳ್ಳುವ ಬದಲು ಬಿಡುಗಡೆಗೊಳಿಸಿತ್ತು. ಮುಂದಿನ ಋತುವಿಗೆ ಶಿಖರ್‌ ಧವನ್‌ ಅವರನ್ನು ನಾಯಕರನ್ನಾಗಿ ನೇಮಿಸಿಕೊಂಡಿತ್ತು.

ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಮಯಂಕ್‌ ಅವರಿಗೆ ಈ ಬಾರಿಯ ಐಪಿಎಲ್‌ ಟೂರ್ನಿ ಮಹತ್ವದ್ದೆನಿಸಿಕೊಂಡಿದೆ. ಅವರು ಹರಾಜಿನಲ್ಲಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅನುಭವಿ ವೇಗದ ಬೌಲರ್‌ ಇಶಾಂತ್‌ ಶರ್ಮ ಮತ್ತು ಜಯದೇವ್‌ ಉನದ್ಕತ್‌ ಅವರೂ ಪಟ್ಟಿಯಲ್ಲಿದ್ದಾರೆ.

ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಹರಾಜು ಪಟ್ಟಿಯಲ್ಲಿರುವ ಇನ್ನೊಬ್ಬ ಪ್ರಮುಖ ಆಟಗಾರ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಅವರನ್ನು ಹರಾಜಿಗೆ ಬಿಟ್ಟುಕೊಟ್ಟಿತ್ತು. ಹ್ಯಾರಿ ಬ್ರೂಕ್ಸ್‌, ರಿಲಿ ರೂಸೊ, ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಮತ್ತು ನಿಕೊಲಸ್‌ ಪೂರನ್‌ ಅವರೂ ಉತ್ತಮ ಬೆಲೆ ಪಡೆಯುವ ಸಾಧ್ಯತೆಯಿದೆ.

ಐಪಿಎಲ್‌ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಪಡೆದ ದಾಖಲೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಹೆಸರಿನಲ್ಲಿದೆ. 2021ರಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ರಾಜಸ್ತಾನ ರಾಯಲ್ಸ್‌ ತಂಡ ಅವರನ್ನು ₹ 16.25 ಕೋಟಿ ನೀಡಿ ಖರೀದಿಸಿತ್ತು.

ಸನ್‌ರೈಸರ್ಸ್‌ ಬಳಿ ಹೆಚ್ಚು ಹಣ: ವಿವಿಧ ಫ್ರಾಂಚೈಸ್‌ಗಳು ತಮ್ಮಲ್ಲಿ ಬಾಕಿಯಿರುವ ಹಣದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಸನ್‌ರೈಸರ್ಸ್‌ ಹೈದರಾಬಾದ್‌ ಅತಿಹೆಚ್ಚು ಮೊತ್ತವನ್ನು ಹೊಂದಿದ್ದು, ಶುಕ್ರವಾರದ ಹರಾಜಿನಲ್ಲಿ ₹ 42.25 ಕೋಟಿ ಖರ್ಚು ಮಾಡಬಹುದು. ನಾಲ್ವರು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 13 ಆಟಗಾರರನ್ನು ಖರೀದಿಸಬಹುದು. ಪಂಜಾಬ್‌ ಕಿಂಗ್ಸ್‌ ₹ 32.20 ಕೋಟಿ ಬಾಕಿ ಹಣ ಹೊಂದಿದೆ.

ಕೋಲ್ಕತ್ತ ನೈಟ್‌ ರೈಡರ್ಸ್‌ (₹ 7.05 ಕೋಟಿ) ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (₹8.75 ಕೋಟಿ) ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿವೆ. ಈ ಫ್ರಾಂಚೈಸ್‌ಗಳು ಹಾಲಿ ತಂಡದ ಬಹುತೇಕ ಆಟಗಾರರನ್ನು ಉಳಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.