
ಮೋದಿ ಭೇಟಿಯಾದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು
ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಬುಧವಾರ ಅವರ ನಿವಾಸದಲ್ಲಿ ಭೇಟಿಯಾಗಿ ಸಂವಾದ ನಡೆಸಿದ್ದಾರೆ. ಈ ವೇಳೆ ಹಚ್ಚೆ ಹಾಗೂ ಚರ್ಮದ ಆರೈಕೆ ಕುರಿತು ನಡೆದ ಹಾಸ್ಯಾಸ್ಪದ ಚರ್ಚೆ ಎಲ್ಲರ ಗಮನಸೆಳೆದಿದೆ.
ನವಿ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಜಯಯಿಸಿತ್ತು. ಬಳಿಕ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಮತ್ತು ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರ ಜೊತೆಗೆ ಬುಧವಾರದಂದು ಪ್ರಧಾನಿ ಮೋದಿಯವರನ್ನು ಆಟಗಾರ್ತಿಯರು ಭೇಟಿಯಾದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮಾ ಅವರ ಹನುಮಾನ್ ಟ್ಯಾಟೂ (ಹಚ್ಚೆ) ಬಗ್ಗೆ ಕೇಳಿದ್ದಾರೆ.
ಇದೇ ಸಂದರ್ಭದಲ್ಲಿ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಹರ್ಲೀನ್ ಡಿಯೋಲ್ ಅವರು ಮೋದಿಯವರಿಗೆ ನಿಮ್ಮ ಚರ್ಮದ ಆರೈಕೆಯ ದಿನಚರಿಯ ಬಗ್ಗೆ ಹೇಳಿ ಎಂದು ಕೇಳಿದರು. ಅದಕ್ಕೆ ಮೋದಿಯವರು, ‘ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ’ ಎಂದು ನಗುವಿನೊಂದಿಗೆ ಉತ್ತರಿಸುತ್ತಾರೆ.
ಮೋದಿ ಭೇಟಿಯಾದಾಗ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ‘ನಾವು 2017 ರಲ್ಲಿ ನಿಮ್ಮನ್ನು ಭೇಟಿಯಾದ ಸಂದರ್ಭ ಇನ್ನೂ ನೆನಪಿದೆ. ಆ ಸಮಯದಲ್ಲಿ ನಾವು ಟ್ರೋಫಿಯೊಂದಿಗೆ ಬಂದಿರಲಿಲ್ಲ. ಆದರೆ ಈ ಬಾರಿ ನಾವು ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಟ್ರೋಫಿಯನ್ನು ಇಲ್ಲಿಗೆ ತಂದಿರುವುದು ನಮಗೆ ಬಹಳ ಗೌರವದ ವಿಷಯವಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.