ADVERTISEMENT

ಸ್ಪೇನ್‌ಗೆ ಹೊರಟಿದ್ದ ಸಿರಾಜ್‌ಗೆ ಸೂರ್ಯ ಕರೆ: ಮತ್ತೆ ನಡೆದಿದ್ದು ಮಿಯಾ ಮ್ಯಾಜಿಕ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 14:44 IST
Last Updated 8 ಫೆಬ್ರುವರಿ 2026, 14:44 IST
ಮೊಹಮ್ಮದ್ ಸಿರಾಜ್ ಅವರನ್ನು ಅಭಿನಂದಿಸಿದ ಸಹ ಆಟಗಾರರು 
ಮೊಹಮ್ಮದ್ ಸಿರಾಜ್ ಅವರನ್ನು ಅಭಿನಂದಿಸಿದ ಸಹ ಆಟಗಾರರು    

ಮುಂಬೈ: ಮೊಹಮ್ಮದ್ ಸಿರಾಜ್ ಅವರು ರಿಯಲ್ ಮ್ಯಾಡ್ರಿಡ್ ಮತ್ತು ರಿಯಲ್ ಸೊಸಿಡಾಡ್ ನಡುವಣ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಈ ವಾರ ಸ್ಪೇನ್‌ಗೆ ಹೋಗಲು ಸಿದ್ಧರಾಗಿದ್ದರು.

ಆದರೆ ಮೂರು ದಿನಗಳ ಹಿಂದೆ ಸಿರಾಜ್ ಮೊಬೈಲ್‌ಗೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕರೆ ಬಂದಿತ್ತು. ಫೋನ್ ಕೈಗೆತ್ತಿಕೊಂಡ ಸಿರಾಜ್‌ ಅವರಿಗೆ ಆ ಕಡೆಯಿಂದ, ‘ಮಿಯಾ, ಬ್ಯಾಗ್ಸ್‌ ಪ್ಯಾಕ್ ಕರ್ ಔರ್ ಆಜಾ ಮುಂಬೈ (ಬ್ಯಾಗ್‌ ಸಿದ್ಧಪಡಿಸಿಕೊಂಡು ಮುಂಬೈಗೆ ಬಾ)‘ ಎಂದಿದ್ದರು ಸೂರ್ಯ. ‘ಅಣ್ಣಾ, ತಮಾಷೆ ಮಾಡಬೇಡ. ಅಂತಹದ್ದೇನೂ ಆಗೋದಿಲ್ಲ ಬಿಡು’ ಎಂದು ಸಿರಾಜ್ ಪ್ರತಿಕ್ರಿಯಿಸಿದ್ದರು. 

ಆದರೆ ಸೂರ್ಯ, ‘ನಾನು ನಿಜ ಹೇಳುತ್ತಿರುವೆ. ಸಿದ್ಧವಾಗಿ ಬಂದುಬಿಡು’ ಎಂದಿದ್ದರು. 

ADVERTISEMENT

‘ಸೂರ್ಯ ಅವರ ನಂತರ ಓಜಾ ಭಾಯ್ (ಭಾರತ ಆಯ್ಕೆ ಸಮಿತಿಯ ಪ್ರಗ್ಯಾನ್ ಓಜಾ) ಕರೆ ಮಾಡಿ ವಿಷಯ ಖಚಿತಪಡಿಸಿದ್ದರು. ಆ ದೇವರು, ಯಾರಿಗೆ  ಏನು ಆಗಬೇಕು ಎಂದು ಬಯಸುತ್ತಾನೋ ಅದೇ ಆಗುತ್ತದೆ. ಯಾರಿಂದಲೂ ಅದನ್ನು ಬದಲಿಸಲಾಗದು’ ಎಂದು ಭಾರತ ಟಿ20 ತಂಡಕ್ಕೆ ಕೊನೆಯ ಕ್ಷಣದಲ್ಲಿ ತಾವು ಆಯ್ಕೆಯಾಗಿ ಬಂದ ಬಗ್ಗೆ ಸಿರಾಜ್ ನೀಡಿದ ವಿವರಣೆ ಇದು. 

ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಮೆರಿಕ ತಂಡವು ಭಾರತಕ್ಕೆ ಕಠಿಣ ‍ಪೈಪೋಟಿಯೊಡ್ಡಿತು. 161 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಮೆರಿಕ ತಂಡವ ಕಟ್ಟಿ ಹಾಕುವಲ್ಲಿ ಸಿರಾಜ್ (29ಕ್ಕೆ3) ಪ್ರಮುಖ ಪಾತ್ರ ವಹಿಸಿದ್ದರು. ಭಾರತ ತಂಡವು 29 ರನ್‌ಗಳಿಂದ ಜಯಿಸಿತ್ತು. 

ರಣಜಿ ಟ್ರೋಫಿ ಟೂರ್ನಿಯಲ್ಲಿ ಹೈದರಾಬಾದ್ ತಂಡದಲ್ಲಿ ಎರಡು ಪಂದ್ಯಗಳನ್ನು ಆಡಿದ್ದ ಸಿರಾಜ್ ಅವರು ಫೆಬ್ರುವರಿ ತಿಂಗಳಪೂರ್ತಿ ವಿಶ್ರಾಂತಿ ಪಡೆಯುವವರಿದ್ದರು. ಅದಕ್ಕಾಗಿ ಪ್ರವಾಸದ ಯೋಜನೆ ರೂಪಿಸಿಕೊಂಡಿದ್ದರು. 

‘ಭಾರತ ತಂಡವನ್ನು ಸೇರಿಕೊಳ್ಳಲು ವಿಮಾನದಲ್ಲಿ ಮಾಡಿದ ಪ್ರಯಾಣವು ಕನಸಿನಂತೆ ಅನಿಸಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುತ್ತದೆ ಎಂದು ನಾನೂ ಯೋಚಿಸಿಯೇ ಇರಲಿಲ್ಲ. ಏಕೆಂದರೆ; ಕಳೆದ ಒಂದು ವರ್ಷದಿಂದ ತಂಡವನ್ನು ಸಿದ್ಧಗೊಳಿಸುವ ಪ್ರಕ್ರಿಯೆ ನಡೆದಿತ್ತು. ಆ ಅವಧಿಯಲ್ಲಿ ನಾನು ಟಿ20 ಪಂದ್ಯಗಳನ್ನು ಆಡಿರಲಿಲ್ಲ. ಆದ್ದರಿಂದ ಅವಕಾಶ ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಇದ್ದವು’ ಎಂದು ಸಿರಾಜ್ ಹೇಳಿದ್ದರು. 

ಸಿರಾಜ್ ಅವರ ಸಹ ಆಟಗಾರ, ಭಾರತ ತಂಡದ ಬ್ಯಾಟರ್ ರಿಂಕು ಸಿಂಗ್ ಅವರು, ‘ಗಾಡ್ಸ್‌ ಪ್ಲಾನ್ ಬೇಬಿ (ದೇವರ ಯೋಜನೆ ಮಗಾ)’ ಎಂದು ಸಂದೇಶ ಹಾಕಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.