ADVERTISEMENT

ನಿಗದಿಯಂತೆ ವಿಶ್ವಕಪ್‌ ನಡೆಯುವುದು ಅನುಮಾನ: ಇಯಾನ್‌ ಮಾರ್ಗನ್

ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಹೇಳಿಕೆ

ಪಿಟಿಐ
Published 29 ಮೇ 2020, 2:14 IST
Last Updated 29 ಮೇ 2020, 2:14 IST
ಇಯಾನ್‌ ಮಾರ್ಗನ್‌ 
ಇಯಾನ್‌ ಮಾರ್ಗನ್‌    

ಲಂಡನ್‌: ‘ನಿಗದಿತ ವೇಳಾಪಟ್ಟಿಯ ಅನುಸಾರವೇ ಈ ಬಾರಿಯ ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್‌ ನಡೆಯುವುದು ಅನುಮಾನ’ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಇಯಾನ್‌ ಮಾರ್ಗನ್, ಗುರುವಾರ‌ ತಿಳಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿದೆ.

‘ಕೊರೊನಾ ವೈರಾಣುವನ್ನು ಹತ್ತಿಕ್ಕುವ ವಿಚಾರದಲ್ಲಿ ಆಸ್ಟ್ರೇಲಿಯಾವು ಇತರೆಲ್ಲಾ ರಾಷ್ಟ್ರಗಳಿಗಿಂತಲೂ ಒಂದು ಹೆಜ್ಜೆ ಮುಂದಿದೆ. ಅಲ್ಲಿನ ಸರ್ಕಾರವು ಎಲ್ಲರಿಗಿಂತಲೂ ಮುಂಚಿತವಾಗಿ ಗಡಿಗಳನ್ನು ಬಂದ್‌ ಮಾಡುವ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಅಲ್ಲಿ ಕೋವಿಡ್‌–19 ಪೀಡಿತರ ಸಂಖ್ಯೆ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಕಪ್‌ ಆಯೋಜನೆಗೆ ಅನುಮತಿ ನೀಡಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಅಲ್ಲಿನ ಸರ್ಕಾರ ಸಿದ್ಧವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದೊಮ್ಮೆ ನಿಗದಿಯಂತೆಯೇ ಟೂರ್ನಿ ನಡೆದರೆ ನನಗಂತಲೂ ಪರಮಾಶ್ಚರ್ಯವಾಗಲಿದೆ’ ಎಂದಿದ್ದಾರೆ.

ADVERTISEMENT

‘ಕೊರೊನಾ ಬಿಕ್ಕಟ್ಟಿನಿಂದ ಸಿಕ್ಕ ರಜೆಯಿಂದ ಆಟಗಾರರೆಲ್ಲಾ ನಿರಾಳರಾಗಿದ್ದಾರೆ. ಇದರಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಿದೆ. ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರಿದ ಬಳಿಕ ಎಲ್ಲರೂ ಪೂರ್ಣ ಸಾಮರ್ಥ್ಯದೊಂದಿಗೆ ಆಡಲೂ ಇದು ಸಹಕಾರಿಯಾಗಿದೆ’ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.