ಎಂ.ಎಸ್.ಧೋನಿ
-ಪಿಟಿಐ ಚಿತ್ರ
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಆವೃತ್ತಿಯ ಅಭಿಯಾನವನ್ನು ಕೊನೆಗೊಳಿಸಿದೆ.
ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಐಪಿಎಲ್ ನಿವೃತ್ತಿ ವಿಚಾರವಾಗಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲ್ಲಿಗೆ ಮುಗಿಯಿತು ಎನ್ನಲಾರೆ... ಮತ್ತೆ ಐಪಿಎಲ್ ಆಡುತ್ತೇನೆ ಎಂದೂ ಹೇಳಲಾರೆ’ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
‘ನಿವೃತ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನನಗೆ 4ರಿಂದ 5 ತಿಂಗಳು ಸಮಯವಿದೆ. ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಮುಖ್ಯ. ಆಟಗಾರರು ತಮ್ಮ ಪ್ರದರ್ಶನಕ್ಕಾಗಿ ನಿವೃತ್ತಿ ಹೊಂದಲು ಪ್ರಾರಂಭಿಸಿದರೆ, ಕೆಲವರು 22ನೇ ವಯಸ್ಸಿನಲ್ಲಿಯೇ ನಿವೃತ್ತಿ ಹೊಂದುತ್ತಾರೆ ಎಂದು ಅವರು ತಮಾಷೆ ಮಾಡಿದ್ದಾರೆ. ನಾನು ರಾಂಚಿಗೆ ಹಿಂತಿರುಗಿ, ಕೆಲವು ದಿನ ಬೈಕ್ ಸವಾರಿ ಮಾಡಿ ಆನಂದಿಸುತ್ತೇನೆ. ನನಗೆ ಸಮಯದ ಅನುಕೂಲವಿದೆ. ಹಾಗಾಗಿ ನಿವೃತ್ತಿ ಬಗ್ಗೆ ಯೋಚಿಸಿ ನಂತರ ನಿರ್ಧರಿಸುತ್ತೇನೆ’ ಎಂದಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಧೋನಿ ಸಂತಸ ವ್ಯಕ್ತಪಡಿಸಿದ್ದಾರೆ. ನಮಗೆ ಈ ಸೀಸನ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ, ಇವತ್ತಿನ ಪ್ರದರ್ಶನ ಅದ್ಭುತವಾಗಿತ್ತು. ನಾವು ಈ ಸೀಸನ್‌ನಲ್ಲಿ ಕ್ಯಾಚ್‌ಗಳನ್ನು ಚೆನ್ನಾಗಿ ಹಿಡಿಯಲಿಲ್ಲ. ಆದರೆ, ಇಂದು ಫೀಲ್ಡಿಂಗ್ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
ಈ ಋತುವಿನಲ್ಲಿ ರುತುರಾಜ್ ಗಾಯಕ್ವಾಡ್ ಗಾಯಗೊಂಡ ಬಳಿಕ ಧೋನಿ ಮತ್ತೆ ಸಿಎಸ್‌ಕೆಯ ನಾಯಕತ್ವ ವಹಿಸಿಕೊಂಡಿದ್ದರು. 43 ವರ್ಷದ ಧೋನಿಯ ಬ್ಯಾಟಿಂಗ್ ಪ್ರದರ್ಶನವು ಈ ಬಾರಿ ಸಾಧಾರಣವಾಗಿತ್ತು. 13 ಇನಿಂಗ್ಸ್‌ಗಳಲ್ಲಿ 196 ರನ್‌ಗಳನ್ನು ಗಳಿಸಿದ್ದು, 135.17ರ ಸ್ಟ್ರೈಕ್ ರೇಟ್ ಮತ್ತು 24.50ರ ಸರಾಸರಿಯನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.