ಯಲಹಂಕ: ಮೈಸೂರು ವಾರಿಯರ್ಸ್ ತಂಡವು ಚೊಚ್ಚಲ ಮಹಾರಾಣಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಾಗಿ ಇಟಗಲ್‌ಪುರ ಸಮೀಪದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಭಾನುವಾರ ಪ್ರತಿಭಾನ್ವೇಷಣೆ ನಡೆಸಿತು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟಿಗರಿಗಾಗಿ ಟೂರ್ನಿ ಆಯೋಜಿಸುತ್ತಿದೆ. ಅದಕ್ಕಾಗಿ ಇದೇ 29ರಂದು ಕೆಎಸ್‌ಸಿಎಯಲ್ಲಿ ಕ್ರೀಡಾಪಟುಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರಾಗನ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್ ಸೇರಿ 5 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಬೆಂಗಳೂರು ಸಮೀಪದ ಆಲೂರು ಮೈದಾನದಲ್ಲಿ ಆಗಸ್ಟ್ 4ರಿಂದ ಟೂರ್ನಿ ನಡೆಯಲಿದೆ. 10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಅಗರಬತ್ತಿ ತಯಾರಕರಾದ ಎನ್.ಆರ್. ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡವು ಕರ್ನಾಟಕದಾದ್ಯಂತ ಇರುವ ಯುವ ಆಟಗಾರ್ತಿಯರನ್ನು ಗುರುತಿಸಲು ಪ್ರತಿಭಾನ್ವೇಷಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ಗುರುತಿಸಲಾಗುವ 60 ರಿಂದ 70 ಆಟಗಾರ್ತಿಯರನ್ನು ಹರಾಜು ಪ್ರಕ್ರಿಯೆಗೆ ಶಿಫಾರಸು ಮಾಡಲಿದೆ.
ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ, ವ್ಯವಸ್ಥಾಪಕ ಎಂ.ಆರ್.ಸುರೇಶ್, ಮುಖ್ಯ ಕೋಚ್ ಕರುಣಾ ಜೈನ್, ಸಹಾಯಕ ಕೋಚ್ ರಜತ್.ಎಸ್, ಭಾರತ ಟೆಸ್ಟ್ ಕ್ರಿಕೆಟ್ ತಂಡದ ಆಟಗಾರ್ತಿ ಶುಭಾ ಸತೀಶ್, ರಾಜ್ಯ ಆಟಗಾರ್ತಿಯರಾದ ನಿರೀಕ್ಷಾ, ದಿಶಾ, ಸಲೋನಿ.ಪಿ, ಲಿಯಾಂಕಾ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.