
ಕರಾಚಿ: ಏಷ್ಯಾ ಕಪ್ ಟ್ರೋಫಿಯನ್ನು ಭಾರತ ತಂಡಕ್ಕೆ ಹಸ್ತಾಂತರಿಸದ ಬಗ್ಗೆ ಆಕ್ರೋಶಗೊಂಡಿರುವ ಬಿಸಿಸಿಐ ಮಂಗಳವಾರ ಆರಂಭಗೊಂಡ ಐಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ. ಹೀಗಾಗಿ, ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಕ್ವಿ ಅವರು ಮುಜುಗರದಿಂದ ಪಾರಾಗಲು ಈ ಸಭೆಗೆ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ.
ಪಾಕಿಸ್ತಾನದ ಗೃಹ ಸಚಿವರಾಗಿರುವ ನಕ್ವಿ ಅವರಿಗೆ ದೇಶದ ಆಂತರಿಕ ರಾಜಕೀಯ ಬೆಳವಣಿಗೆ ಸಹ, ಈ ಸಭೆಯಲ್ಲಿ ಭಾಗವಹಿಸಲು ತಡೆಯಾಗಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮೂಲಗಳು ತಿಳಿಸಿವೆ. ಆದರ ಈ ರಾಜಕೀಯ ಬೆಳವಣಿಗೆಯ ಏನೆಂಬ ಬಗ್ಗೆ ಪಿಸಿಸಿ ಮೂಲ ನಿರ್ದಿಷ್ಟವಾಗಿ ತಿಳಿಸಿಲ್ಲ.
ಜಯ್ ಶಾ ಅವರು ಐಸಿಸಿ ಮುಖ್ಯಸ್ಥರಾಗಿ 2024ರ ಡಿಸೆಂಬರ್‌ನಲ್ಲಿ ಆಯ್ಕೆಯಾದ ನಂತರ ನಡೆದ ಯಾವುದೇ ಸಭೆಗಳಿಗೂ ನಕ್ವಿ ಅವರು ಹಾಜರಾಗಿಲ್ಲ.
‘ಪಿಸಿಬಿಯ ಕಾರ್ಯನಿರ್ವಾಹಕ ಅಧಿಕಾರಿ ಸುಮೇರ್ ಸಯ್ಯದ್ ಅವರು ನಕ್ವಿ ಅವರ ಪರವಾಗಿ ಸಭೆಯಲ್ಲಿ ಹಾಜರಾಗುವ ಸಾಧ್ಯತೆ ಇದೆ.
ದುಬೈನಲ್ಲಿ ಕಳೆದ ಸೆಪ್ಟೆಂಬರ್ 28ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಏಷ್ಯಾ ಕಪ್ ಗೆದ್ದಿತ್ತು. ಆದರೆ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಪಡೆಯಲು ಭಾರತ ನಿರಾಕರಿಸಿತ್ತು. ಎಸಿಸಿ ಅಧ್ಯಕ್ಷರಾಗಿ ಟ್ರೋಫಿ ಪ್ರದಾನ ಮಾಡುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದ ನಕ್ವಿ ಟ್ರೋಫಿಯೊಡನೆ ಹೊರಟಿದ್ದರು. ಟ್ರೋಫಿ ಸದ್ಯ ದುಬೈನ ಎಸಿಸಿ ಕೇಂದ್ರಕಚೇರಿಯಲ್ಲಿದ್ದು ಕೊಠಡಿಗೆ ಬೀಗಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.