
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಎಐ ಚಿತ್ರ
ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನಗಳ ಪೈಕಿ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂ ಒಂದು. ಇಂತ ಬೃಹತ್ ಕ್ರಿಕೆಟ್ ಮೈದಾನ ದಿನ ಕಳೆದಂತೆ ಕುಖ್ಯಾತಿ ಒಂದನ್ನು ಪಡೆದುಕೊಳ್ಳುತ್ತಿದೆ. ಅದು ಕೂಡ ಯಾವುದೇ ತಂಡ ಅಥವಾ ಆಟಗಾರ ಇಲ್ಲಿ ಯಶಸ್ಸು ಪಡೆದರೆ, ಮುಂದಿನ ದಿನಗಳಲ್ಲಿ ಆ ಯಶಸ್ಸು ಮರೀಚಿಕೆಯಾಗುತ್ತದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ನಿಜಕ್ಕೂ ಈ ಸ್ಟೇಡಿಯಂನಲ್ಲಿ ಇಂತಹ ಘಟನೆಗಳು ನಡೆದಿದೆಯಾ ? ಇಲ್ಲಿನ ಅಂಕಿ ಅಂಶಗಳನ್ನು ನೋಡೋಣ.
2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಇದೇ ಮೈದಾನದಲ್ಲಿ ಗೆಲ್ಲುತ್ತದೆ. ಇದಾದ ಬಳಿಕ ಈವರೆಗೆ ಗುಜರಾತ್ ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
2023ರಲ್ಲಿ ಚೆನೈ ಸೂಪರ್‌ಕಿಂಗ್ಸ್ ತಂಡ ಕೊನೆಯ ಬಾರಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಐಪಿಎಲ್ ಟ್ರೋಫಿ ಗೆಲ್ಲುತ್ತದೆ. ನಂತರದ ಸೀಸನ್‌ಗಳಲ್ಲಿ ಚೆನೈ ಸೂಪರ್‌ಕಿಂಗ್ಸ್ ಸತತ ಹಿನ್ನಡೆ ಅನುಭವಿಸುತ್ತಿದೆ.
2023ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆದ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಈ ಗೆಲುವಿನ ನಂತರ ಈವರೆಗೆ ಆಸ್ಟ್ರೇಲಿಯಾ ಯಾವುದೇ ಐಸಿಸಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಸದ್ಯ 2026ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಲೀಗ್‌ನಲ್ಲೇ ಹೊರ ನಡೆದಿದೆ.
2025ರಲ್ಲಿ ಇದೇ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಬಳಿಕ, ಬೆಂಗಳೂರಿನಲ್ಲಿ ಕಾಲ್ತುಳಿತ ಸಂಭವಿಸಿದೆ. ಫ್ರಾಂಚೈಸಿ ಬದಲಾವಣೆಯ ಚರ್ಚೆ ಕೂಡ ನಡೆಯುತ್ತಿದೆ.
2023ರ ಮಾರ್ಚ್ 12ರಂದು ಇದೇ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 186 ರನ್‌ಗಳನ್ನು ಕಲೆಹಾಕಿದ್ದರು. ಇದಾದ 2 ವರ್ಷಗಳಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ವಿಶೇಷವೆಂದರೆ, ಈ ಎರಡು ವರ್ಷಗಳ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತವರಿನಲ್ಲಿ ಯಾವುದೇ ಶತಕ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ.
2025 ರ ಫೆಬ್ರುವರಿಯಲ್ಲಿ ಭಾರತ ಮತ್ತು ಇಂಗ್ಲೇಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ 112 ರನ್ ಗಳನ್ನು ಹೊಡೆಯುತ್ತಾರೆ. ಈ ಸೆಂಚುರಿಯಿಂದ ಗಿಲ್ ಕ್ರಿಕೆಟ್‌ನ ಮೂರು ಮಾದರಿಯ ನರೇಂದ್ರ ಮೋದಿ ಕ್ರೀಡಾಂಗಂಣದಲ್ಲಿ ಸೆಂಚುರಿ ಬಾರಿಸಿದ ಮೊದಲಿಗೆ ಎಂಬ ದಾಖಲೆ ಬರೆಯುತ್ತಾರೆ. ಆದರೆ ಈ ಪಂದ್ಯದ ನಂತರ ಫಾರ್ಮ್ ಕಳೆದುಕೊಳ್ಳುತ್ತಾರೆ. ಸದ್ಯ 2026ರ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿದಿದ್ದಾರೆ.
2025ರಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಶತಕ ಹೊಡೆಯುತ್ತಾರೆ. ಇದಾದ ಬಳಿಕ ನಡೆದ 4 ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ಅವರು ಕೇವಲ 1 ಅರ್ಧಶತಕ ಮಾತ್ರ ಗಳಿಸುತ್ತಾರೆ. ಒಟ್ಟಾರೆ 8 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 164 ರನ್ ಮಾತ್ರ ಗಳಿಸುತ್ತಾರೆ.
2023ರಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಉಸ್ಮಾನ್ ಕವಾಜ 180 ರನ್ ಗಳಿಸುತ್ತಾರೆ. ಈ ವೇಳೆ ಟೆಸ್ಟ್ ಕ್ರಿಕೆಟ್ ನಲ್ಲಿ ನಂ1 ಬ್ಯಾಟರ್ ಆಗಿದ್ದ ಉಸ್ಮಾನ್ ಕವಾಜ ನಂತರದ ಸರಣಿಗಳಲ್ಲಿ ಹಿನ್ನಡೆ ಅನುಭವಿಸುತ್ತಾರೆ.
ಆಸ್ಟ್ರೇಲಿಯಾ ಇನ್ನೊಬ್ಬ ಬ್ಯಾಟರ್ ಕ್ಯಾಮರೂನ್ ಗ್ರೀನ್ ಇದೇ ಮೈದಾನದಲ್ಲಿ 114ರನ್ ಗಳಿಸುತ್ತಾರೆ. ಈ ಸೆಂಚುರಿ ಬಳಿಕ ಫಾರ್ಮ್ ಕಳೆದುಕೊಂಡು ತಂಡದಿಂದಲೇ ಹೊರಗುಳಿಯುತ್ತಾರೆ.
ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ವಿಲ್ ಜಾಕ್ಸ್ ಇದೇ ಮೈದಾನದಲ್ಲಿ 41 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಬಳಕ 68 ಪಂದ್ಯಗಳನ್ನು ಆಡಿದ್ದಾರೆ. ಇವರೆಗೆ ಒಂದು ಶತಕ ಸಿಡಿಸಿಲ್ಲ.
ಇನ್ನೂ, ಈ ಬಾರಿಯ ಟಿ20 ವಿಶ್ವಕಪ್ ಫೈನಲ್‌ಗೆ ಪಾಕಿಸ್ತಾನ ತಂಡ ಬಾರದೆ ಇದ್ದರೆ, ಇದೇ ಮೈದಾನದಲ್ಲಿ ಫೈನಲ್ ಪಂದ್ಯ ಕೂಡ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.