ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ಹುದ್ದೆಯಿಂದ ವಜಾಗೊಂಡಿರುವ ಅಭಿಷೇಕ್ ನಾಯರ್ ಅವರು ಕೋಲ್ಕತ್ತ ನೈಟ್ ರೈಡರ್ಸ್‌ನ ನೆರವು ಸಿಬ್ಬಂದಿ ತಂಡವನ್ನು ಮರಳಿ ಸೇರಿಕೊಂಡಿದ್ದಾರೆ. ಆದರೆ, ತಂಡದಲ್ಲಿ ಅವರ ಪಾತ್ರದ ಕುರಿತು ಇನ್ನೂ ಬಹಿರಂಗವಾಗಿಲ್ಲ.
‘ಮರಳಿ ಮನೆಗೆ ಸ್ವಾಗತ, ಅಭಿಷೇಕ್ ನಾಯರ್’ ಎಂದು ಕೆಕೆಆರ್ ತನ್ನ ‘ಎಕ್ಸ್’ ಖಾತೆಯಲ್ಲಿ ಶನಿವಾರ ಪೋಸ್ಟ್ ಮಾಡಿದೆ. ಆ ಮೂಲಕ ನಾಯರ್ ಅವರು ತಂಡಕ್ಕೆ ಮರಳಿರುವುದನ್ನು ದೃಢಪಡಿಸಿದೆ.
ಇದಕ್ಕೂ ಮೊದಲು ಪೋಸ್ಟ್ ಮಾಡಿ, ನಾಯರ್ ಅವರು ಸಹಾಯಕ ಕೋಚ್ ಆಗಿ ತಂಡಕ್ಕೆ ಮರಳಿದ್ದಾರೆ ಎಂದು ಬರೆದುಕೊಂಡಿತ್ತು. ಆದರೆ, ಕೆಲವೇ ಹೊತ್ತಿನಲ್ಲಿ ಆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.
2024ರಲ್ಲಿ ಕೋಲ್ಕತ್ತ ತಂಡವು ಐಪಿಎಲ್‌ನಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದಾಗ 41 ವರ್ಷ ವಯಸ್ಸಿನ ನಾಯರ್ ಅವರು ತಂಡದ ಸಹಾಯಕ ಕೋಚ್ ಮತ್ತು ಮೆಂಟರ್ ಆಗಿದ್ದರು. ದಶಕಗಳ ಕಾಲ ಕೆಕೆಆರ್ ಅಕಾಡೆಮಿಯಲ್ಲಿ ಆಟಗಾರರ ತರಬೇತಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ನಾಯರ್ 2024ರಲ್ಲಿ ರಾಷ್ಟ್ರೀಯ ತಂಡ ಸೇರಿದ್ದರು. ಕಳೆದ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿಗಳಲ್ಲಿ ಅನುಭವಿಸಿದ ಹಿನ್ನಡೆಯ ಕಾರಣಕ್ಕಾಗಿ ಬಿಸಿಸಿಐ ನಡೆಸಿದ ಮೌಲ್ಯಮಾಪನದ ಬಳಿಕ ನಾಯರ್ ಅವರನ್ನು ತೆಗೆದುಹಾಕಲಾಗಿತ್ತು.
ನಾಯರ್ ಅವರು ಭಾರತ ತಂಡದ ಪರ ಮೂರು ಏಕದಿನ ಪಂದ್ಯ ಮತ್ತು 103 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.