
ದುಬೈ: ‘ಚಾಂಪಿಯನ್ ತಂಡಕ್ಕೆ ಟ್ರೋಫಿ ಕೊಡದಿದ್ದನ್ನು ನನ್ನ ಜೀವಮಾನದಲ್ಲಿ ಕಂಡಿಲ್ಲ’ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಜಯ ಸಾಧಿಸಿತ್ತು. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹಸೀನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಸೂರ್ಯ ಬಳಗ ನಿರಾಕರಿಸಿತ್ತು. ಇದು ಪಾಕ್ ಮತ್ತು ಭಾರತ ಟೀಮ್ ನಡುವೆ ಹೈಡ್ರಾಮಾಕ್ಕೆ ಕಾರಣವಾಗಿತ್ತು.
ನಖ್ವಿ ಅವರ ಭಾರತ ವಿರೋಧ ನಿಲುವೇ ಅವರಿಂದ ಟ್ರೋಫಿ ಸ್ವೀಕರಿಸದೇ ಇರಲು ಕಾರಣ ಎಂದು ಟೀಮ್ ಇಂಡಿಯಾ ಸ್ಪಷ್ಟಪಡಿಸಿದೆ.
ತಮ್ಮಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿದ ಬೆನ್ನಲ್ಲೇ ವೇದಿಕೆಯಿಂದ ಹೊರನಡೆದ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿರುವ ಸೂರ್ಯಕುಮಾರ್ ಯಾದವ್, ‘ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗಿನಿಂದ ಈವರೆಗೆ ಚಾಂಪಿಯನ್ ತಂಡಕ್ಕೆ ಟ್ರೋಫಿ ಕೊಡದೇ ಇರುವುದನ್ನು ಕಂಡಿಲ್ಲ. ಇದು ಟೂರ್ನಿಯಲ್ಲಿ ಕಷ್ಟಪಟ್ಟು ಆಡಿ ಸಂಪಾದಿಸಿದ ಗೆಲುವಾಗಿದೆ’ ಎಂದು ಹೇಳಿದ್ದಾರೆ.
‘ಸೆಪ್ಟೆಂಬರ್ 4ರಿಂದ ನಾವು ಇಲ್ಲಿದ್ದೇವೆ. ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದ್ದರಿಂದ ಚಾಂಪಿಯನ್ ಆಗಲು ನಾವು ಅರ್ಹರು ಎಂದು ಭಾವಿಸುತ್ತೇನೆ. ಇದಕ್ಕಿಂತ ಹೆಚ್ಚು ಇನ್ನೇನೂ ಹೇಳಲಾರೆ’ ಎಂದಿದ್ದಾರೆ.
‘ಟ್ರೋಫಿ ಬಗ್ಗೆ ಹೇಳಬೇಕೆಂದರೆ ನನ್ನ ಟ್ರೋಫಿಗಳು ನನ್ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿವೆ. 14 ಜನರ ನನ್ನ ತಂಡ, ಸಹಾಯಕ ಸಿಬ್ಬಂದಿಯೇ ನನಗೆ ನಿಜವಾದ ಟ್ರೋಫಿಗಳು. ಇವೆಲ್ಲವೂ ಸುಂದರ ನೆನಪುಗಳಾಗಿವೆ. ಅದು ಮುಂದೆ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.
‘ಆಟ ಮುಗಿದ ನಂತರ, ಚಾಂಪಿಯನ್‌ಗಳು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ. ಟ್ರೋಫಿಯ ಚಿತ್ರವಲ್ಲ’ ಎಂದು ಅವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.